ನಾಪೋಕ್ಲು ಫೆ.20 : ಮಹಾಶಿವರಾತ್ರಿ ಉತ್ಸವವನ್ನು ನಾಡಿನ ವಿವಿಧ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ನಾಪೋಕ್ಲು ಸಮೀಪದ ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ಮಕ್ಕಿ ಶ್ರೀ ಶಾಸ್ತ್ರವು ದೇವಾಲಯ, ಬಿದ್ದಾಟಂಡ ವಾಡೆಯ ಶ್ರೀ ಮಹಾದೇವ ದೇವಾಲಯ, ಕಕ್ಕುಂದ ಕಾಡು ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯ, ನೆಲಜಿ ಶ್ರೀ ಭಗವತಿ, ಇಗ್ಗುತ್ತಪ್ಪ ಸೇರಿದಂತೆ ಹಲವು ದೇವಾಲಯಗಳಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.
ಉತ್ಸವದ ಅಂಗವಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಪಾಲೂರು ಗ್ರಾಮದ ಮಹಾಲಿಂಗೇಶ್ವರ ದೇವಾಲಯದಲ್ಲಿ ಬೆಳಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸುತ್ತಮುತ್ತಲ ಗ್ರಾಮಗಳ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಏಕ ರುದ್ರಭಿಷೇಕ ಹಾಗೂ ಮಹಾಪೂಜೆ ಜರುಗಿ ತೀರ್ಥ ಪ್ರಸಾದ ವಿತರಣೆಯ ಬಲಿಕ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಜಾಗರಣೆಯ ಅಂಗವಾಗಿ ರಾತ್ರಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಮಾಜಿ ಮುಜರಾಯಿ ಮಂತ್ರಿ ಕೃಷ್ಣಯ್ಯ ಶೆಟ್ಟಿ ವಿತರಿಸಿದ ಗಂಗಾಜಲವನ್ನು ಭಕ್ತರಿಗೆ ವಿತರಿಸಲಾಯಿತು.
ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ಪಾರು ಪತ್ತೆಗಾರ ತೊರೆರ ಮನು, ಅರ್ಚಕ ಅರುಣ್ ಕುಮಾರ್, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು, ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ದೇವಾಲಯದ ಮುಖ್ಯ ಅರ್ಚಕ ದೇವಿ ಪ್ರಸಾದ್ ಮಾತನಾಡಿ, ದೇವಾಲಯದಲ್ಲಿ ಪ್ರತಿದಿನ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಶಿವರಾತ್ರಿಯಂದು ರುದ್ರಾಭಿಷೇಕ ಹಾಗೂ ಮಹಾಪೂಜೆ ನಡೆಯಲಿದ್ದು ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ರಾತ್ರಿಯು ರುದ್ರಾಭಿಷೇಕ ಹಾಗೂ ಮಹಾಪೂಜೆಯನ್ನು ನಡೆಸಲಾಗುವುದು. ಬಂದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುವುದು ಎಂದರು.
ನಿವೃತ್ತ ಪ್ರಾಂಶುಪಾಲ ಬೈತಡ್ಕ ಕುಂಜಪ್ಪ ಮಾತನಾಡಿ, ಸುಮಾರು 70 ವರ್ಷಗಳಿಂದ ದೇವಾಲಯದೊಂದಿಗೆ ಸಂಪರ್ಕ ಹೊಂದಿದ್ದೇನೆ. ಈ ಸನ್ನಿಧಿಯಲ್ಲಿ ಭಕ್ತಿಪರಶರಾಗಿ ಪ್ರಾರ್ಥಿಸಿದರೆ ಇಷ್ಟ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದರು.
ಕಾಫಿ ಬೋರ್ಡಿನ ನಿವೃತ್ತ ಅಧಿಕಾರಿ ಅಚ್ಚುಡ ಪಿ.ಅನಂತಕುಮಾರ್ ಮಾತನಾಡಿ, ಪ್ರತಿ ವರ್ಷ ಶಿವರಾತ್ರಿ ಉತ್ಸವದಂದು ಪಾಲ್ಗೊಳ್ಳುತ್ತಾ ಬಂದಿದ್ದೇನೆ. ಇಲ್ಲಿನ ಶಿವ ಪಾರ್ವತಿಯರು ಒಂದೇ ಪೀಠದಲ್ಲಿ ಇರುವುದು ಹಾಗೂ ಪಶ್ಚಿಮಾಭಿಮುಖವಾಗಿ ಬಾಗಿಲು ಹೊಂದಿರುವುದು ದೇವಾಲಯ ವಿಶೇಷವಾಗಿದ್ದು, ಭಕ್ತಾದಿಗಳ ಗಮನ ಸೆಳೆಯುತ್ತಿದೆ ಎಂದರು.
ವರದಿ : ದುಗ್ಗಳ ಸದಾನಂದ