ಮಡಿಕೇರಿ ಫೆ.20 : ಕೊಡಗು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ ಎಂದು ಮಡಿಕೇರಿ ಕ್ಷೇತ್ರದ ಜೆಡಿಎಸ್ ಸಂಭವನೀಯ ಅಭ್ಯರ್ಥಿ ನಾಪಂಡ ಮುತ್ತಪ್ಪ ಅಭಿಪ್ರಾಯಪಟ್ಟರು.
ಚೆಟ್ಟಳ್ಳಿ ಸಮೀಪದ ಕಂಡಕೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ನಾಪಂಡ ಮುತ್ತಪ್ಪ ಕೊಡಗು ಜಿಲ್ಲೆಯ ಮತದಾರರು ಬದಲಾವಣೆ ಬಯಸಿದ್ದಾರೆ. ಜಾತಿ, ಧರ್ಮಗಳ ನಡುವೆ ಒಡಕು ಮೂಡಿಸುವ ರಾಜಕೀಯದಿಂದ ಜನರು ಬೇಸತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸಂಪೂರ್ಣವಾಗಿ ಕೊಡಗು ಜಿಲ್ಲೆಯನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಈ ಬಾರಿ ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಅಪಾರವಾದ ಬೆಂಬಲ ವ್ಯಕ್ತವಾಗಿದ್ದು,. ಯುವಕರು ಜೆಡಿಎಸ್ ಪಕ್ಷಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುತ್ತಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದ್ದು,ರಾಜ್ಯದಲ್ಲಿ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭ ನಾಪಂಡ ಮುತ್ತಪ್ಪ ಅವರನ್ನು ಕಂಡಕರೆ ಗ್ರಾಮದ ಯುವಕರು ಸನ್ಮಾನಿಸಿ ಗೌರವಿಸಿದರು.
ನೆಟ್ವರ್ಕ್ ಹಾಗೂ ಮೈದಾನ ಸಮಸ್ಯೆ : ಕಂಡಕರೆ ಗ್ರಾಮದಲ್ಲಿ ಇದುವರೆಗೆ ನೆಟ್ವರ್ಕ್ ಭಾಗ್ಯ ದೊರೆತಿಲ್ಲ ಹಾಗೂ ಯುವಕರಿಗೆ ಆಟ ಆಡಲು ಮೈದಾನವಿಲ್ಲ. ಇದರ ಬಗ್ಗೆ ಜನಪ್ರತಿನಿಧಿಗಳ ಕಾಳಜಿ ವಹಿಸುತ್ತಿಲ್ಲ. ತಾವು ಮುತುರ್ವಜಿ ವಹಿಸಿ ಸಮಸ್ಯೆ ಬಗೆಹರಿಸಕೊಡಬೇಕಾಗಿ ಗಾಂಧಿ ಯುವಕ ಸಂಘದ ಅಧ್ಯಕ್ಷ ಷರೀಫ್ ಪಿ.ಎಂ ಅವರ ನೇತೃತ್ವದ ಯುವಕರ ತಂಡದ ಮುತ್ತಪ್ಪನವರ ಗಮನಕ್ಕೆ ತಂದರು.
ಸಮಸ್ಯೆಯನ್ನು ಬಗೆಹರಿಸುವುದಾಗಿ ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಭರವಸೆ ನೀಡಿದರು.
ಈ ಸಂದರ್ಭ ಜೆಡಿಎಸ್ ಯುವ ಘಟಕದ ಪದಾಧಿಕಾರಿಗಳಾದ ವಿಜಯ್, ಶಿಯಬ್ ವಿಪಿಎಸ್ ನೆಲ್ಲಿಹುದಿಕೇರಿ, ಮಂಜು, ಶೈಜು, ಸುಹೈಲ್, ಷರೀಪ್, ಅಶ್ರಫ್,ಉನೈಸ್,ಸವಾದ್,ಇರ್ಷಾದ್,ಶಿಬಿಲ್, ಸಲ್ಮಾನ್, ಶುಕ್ಕೂರ್ ಹಾಗೂ 50 ಕ್ಕೂ ಹೆಚ್ಚು ಯುವಕರು ಇದ್ದರು.