ಮಡಿಕೇರಿ, ಫೆ.22: ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬದ ಅಂಗವಾಗಿ ಮಾ.8 ರಂದು ಕುಶಾಲನಗರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಡಗಿನ ಮಹಿಳಾ ಪತ್ರಕರ್ತೆಯರ ಸಾರಥ್ಯದಲ್ಲಿ ನಡೆಯಲಿರುವ ದಿನಾಚರಣೆಯಲ್ಲಿ, ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ ಸಾಧಕರಿಗೆ ಸನ್ಮಾನ ಮತ್ತಿತರ ಚಟುವಟಿಕೆಗಳು ನಡೆಯಲಿದೆ ಎಂದು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಹೇಳಿದರು.
ಮಡಿಕೇರಿ ಪತ್ರಿಕಾ ಭವನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಹಬ್ಬ ಮಹೋತ್ಸವ ಅಂಗವಾಗಿ ಬೆಳ್ಳಿ ಹಬ್ಬ ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಕುಶಾಲನಗರ ಗೌಡ ಸಮಾಜ ಮತ್ತು ಕೊಡವ ಕೊಡವ ಸಮಾಜ, ಟಿಟಿಡಿ ಮತ್ತು ಕುಶಾಲನಗರದ ಸಮಸ್ತ ಮಹಿಳಾ ಭಜನಾ ಮಂಡಳಿ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಿಳಾ ಪತ್ರಕರ್ತರಿಂದ ವಿಭಿನ್ನ ಮನರಂಜನೆ, ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಅಂದು ಬೆಳಿಗ್ಗೆ ಕುಶಾಲನಗರ ಗಣಪತಿ ಸನ್ನಿಧಿಯಿಂದ ಪತ್ರಕರ್ತರು ಮತ್ತು ವಿವಿಧ ಸಂಘ ಸಂಸ್ಥೆಗಳ ಮಹಿಳೆಯರ ಭವ್ಯ ಮೆರವಣಿಗೆಯನ್ನು ಏರ್ಪಡಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದ ಮಹಿಳೆಯರು ಸನ್ಮಾನ ಸ್ವೀಕರಿಸಲಿದ್ದಾರೆ ಎಂದು ಸವಿತಾ ರೈ ಹೇಳಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕಿ ವನಿತಾ ಚಂದ್ರಮೋಹನ್ ಮತ್ತು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಮೋಹನ್ ಹಾಗೂ ತಾಲೂಕು ಸಂಘದ ಪದಾಧಿಕಾರಿಗಳು ಕಾರ್ಯಕ್ರಮದ ರೂಪುರೇಷೆ ತಯಾರಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸಾಂಸ್ಕೃತಿಕ ಸಮಿತಿ ಸಂಚಾಲಕಿ ವನಿತಾ ಚಂದ್ರಮೋಹನ್ ಮಾತನಾಡಿ, ಕುಶಾಲನಗರ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪತ್ರಕರ್ತರು, ಅವರ ಕುಟುಂಬದವರು ಹಾಗೂ ಮಹಿಳಾ ಸಂಘ ಸಂಸ್ಥೆಗಳ ಸದಸ್ಯರಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು. ಜಿಲ್ಲೆಯ ಮಹಿಳಾ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿಯೊಬ್ಬರು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಕೊಡಗು ಪ್ರೆಸ್ ಕ್ಲಬ್ ಜಂಟಿ ಕಾರ್ಯದರ್ಶಿ ಪ್ರಜ್ಞಾ ರಾಜೇಂದ್ರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಯಶೋಧ, ನಿರ್ದೇಶಕರಾದ ವಿಷ್ಮಾ ಪೆಮ್ಮಯ್ಯ ಹಾಗೂ ರೇಖಾ ಗಣೇಶ್ ಹಾಜರಿದ್ದರು.