ನಾಪೋಕ್ಲು ಫೆ.23 : ಎಮ್ಮೆಮಾಡು ಮಖಾಂ ಉರೂಸ್ ಪ್ರಯುಕ್ತ ಫೆ.27 ಮತ್ತು ಮಾ.3 ರಂದು ಬೆಳಗ್ಗೆ 6ಗಂಟೆಯಿಂದ ರಾತ್ರಿ 9ರ ವರೆಗೆ ನಾಪೋಕ್ಲು ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದ್ದು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಶೇಖರ್ ಮನವಿ ಮಾಡಿದರು.
ಉರೂಸ್ ಪ್ರಯುಕ್ತ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಸರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು, ಎಮ್ಮೆಮಾಡು ಉರೂಸ್ ಕಾರ್ಯಕ್ರಮಕ್ಕೆ ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಹಲವಾರು ಭಕ್ತಾದಿಗಳು ಆಗಮಿಸುತ್ತಿದ್ದು ಫೆ.27 ರಂದು ನಾಪೋಕ್ಲು ಸಂತೆ ದಿನಕೂಡ ಆಗಿದ್ದು ಪಟ್ಟಣದಲ್ಲಿ ವಾಹನದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನು ನಿಯಂತ್ರಿಸಲು ನಾಪೋಕ್ಲು ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ತಮ್ಮ ತಮ್ಮ ವಾಹನಗಳನ್ನು ಹಳೆ ತಾಲೂಕುವಿನಿಂದ ನಾಪೋಕ್ಲು ಸಂತೆ ಮಾರುಕಟ್ಟೆಯವರೆಗಿನ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸದೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಈ ದಿನ ವಾಹನಗಳ ನಿಲುಗಡೆಗೆ ಬದಲಿ ವ್ಯವಸ್ಥೆಮಾಡಲಾಗಿದ್ದು, ನೆಲಜಿ,ಕೊಳಕೇರಿ,ಕಕ್ಕಬ್ಬೆ ಭಾಗದಿಂದ ಸಂತೆಗೆ ಬರುವ ಜನರು ಹಳೆ ತಾಲೂಕು ಸರ್ಕಾರಿ ಶಾಲಾ ಮೈದಾನದಲ್ಲಿ ತಮ್ಮ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಬೇತು ರಸ್ತೆ, ಪೊಲೀಸ್ ಠಾಣಾ ಮೈದಾನ, ನಾಡ ಕಛೇರಿ ಆವರಣ, ಚೆರಿಯ ಪರಂಬು ರಸ್ತೆಯಲ್ಲಿ ಇತರೆ ಕಡೆಗಳಿಂದ ಬರುವ ಸಾರ್ವಜನಿಕರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಸಭೆಯಲ್ಲಿ ಸಾರ್ವಜನಿಕರ ಪರವಾಗಿ ಮಾತನಾಡಿದ ಬಿಜೆಪಿ ಮುಖಂಡ ಕುಂದ್ಯೋಳಂಡ ರಮೇಶ್ ಮುದ್ದಯ್ಯ ಎಮ್ಮೆಮಾಡು ಉರೂಸ್ ಸಮಾರಂಭವು ಎಲ್ಲಾ ಜನಾಂಗದವರನ್ನು ಒಗ್ಗೂಡಿಸುವ ಒಂದು ಕೇಂದ್ರವಾಗಿದೆ. ಇದ್ದಕ್ಕೆ ನಾವು ಎಲ್ಲಾರೀತಿಯಲ್ಲಿ ಪ್ರತಿ ವರ್ಷ ಸಹಕಾರ ನೀಡುತ್ತಾಬಂದಿದ್ದೇವೆ ಎಂದರು. ನಾಪೋಕ್ಲು ಪಟ್ಟಣದಲ್ಲಿ ಅಂಗಡಿ ಮಾಲೀಕರು ತಮ್ಮ ವಾಹನಗಳನ್ನು ಬೆಳಗ್ಗೆಯಿಂದ ಸಂಜೆವರೆಗೆ ಅಂಗಡಿಗಳ ಮುಂದೆ ನಿಲ್ಲಿಸುವುದರಿಂದ ಸಾರ್ವಜನಿಕರ ವಾಹನ ನಿಲುಗಡೆಗೆ ತೊಂದರೆಯಾಗುತ್ತಿದೆ. ಇದರಿಂದ ಪ್ರತಿ ದಿನ ಪಟ್ಟಣದಲ್ಲಿ ವಾಹನ ದಟ್ಟನೆ ಹೆಚ್ಚಾಗುತ್ತಿದೆ ಇದಕ್ಕೆ ಕ್ರಮವಹಿಸಬೇಕೆಂದರು.
ನಾಪೋಕ್ಲು ಗ್ರಾ.ಪಂ.ಸದಸ್ಯ ಪ್ರತೀಪ್ ಮಾತನಾಡಿ ಉರೂಸ್ ಅಂಗವಾಗಿ ಸೋಮವಾರ ಎಮ್ಮೆಮಾಡು ಕೂರುಳಿ ಮಾರ್ಗವಾಗಿ ಏಕ ಮುಖ ಸಂಚಾರಕ್ಕೆ ಪ್ರತಿ ವರ್ಷ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆದರೆ ಈ ವರ್ಷ ಕೂರುಳಿ ರಸ್ತೆಯು ನೂತನವಾಗಿ ಕಾಂಕ್ರೆಟ್ ಡಾಂಬರೀಕರಣವಾಗಿದ್ದು ವಾಹನಗಳ ಸಂಚಾರದ ವೇಗ ಹೆಚ್ಚಾಗಿದೆ. ಇದರಿಂದ ಆಪಘಾತ ವಾಗುವ ಸಾಧ್ಯತೆ ಹೆಚ್ಚಾಗಿದ್ದು ಇದಕ್ಕೆ ವೇಗ ನಿಯಂತ್ರಿಸಲು ಬ್ಯಾರಿಗೇಟ್ ವ್ಯವಸ್ಥೆ ಕಲ್ಪಿಸಬೇಕೆಂದು ಗಮನ ಸೆಳೆದರು.
ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಮಾತನಾಡಿ ಎಮ್ಮೆಮಾಡು ಊರೂಸ್ ಕಾರ್ಯಕ್ರಮಕ್ಕೆ ನಾಪೋಕ್ಲು ವಿಭಾಗದ ಸರ್ವಜನಾಂಗದವರು ಎಲ್ಲಾರೀತಿಯಲ್ಲಿ ಸಹಕಾರ ನಿಡುತ್ತಿದ್ದಾರೆ.ಹೊರ ಜಿಲ್ಲೆ, ರಾಜ್ಯಗಳಿಂದ ಸಮಾರಂಭಕ್ಕೆ ಬರುವ ಭಕ್ತಾದಿಗಳಿಗೆ ಜಿಲ್ಲೆಯ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್ ಇಲಾಖೆಯವರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಗ್ರಾ. ಪಂ.ಸದಸ್ಯ ಚಕ್ಕೇರ ಇಸ್ಮಾಯಿಲ್ ದ್ವನಿಗೂಡಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ವೃತ ನಿರೀಕ್ಷಕ ಶೇಖರ್ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳ ತಪಾಸಣೆ ನಡೆಯುತ್ತವೆ, ಉರೂಸ್ ಸಮಾರಂಭಕ್ಕೆ ಬರುವ ಭಕ್ತಾದಿಗಳಿಗೆ ತೊಂದರೆಯಾಗದಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.ನಾಪೋಕ್ಲು ಪಟ್ಟಣದ ಸಂಚಾರಿ ಅವ್ಯವಸ್ಥೆಗಳ ಬಗ್ಗೆ ಉರೂಸ್ ಸಮಾರಂಭ ಮುಗಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ನಾಪೋಕ್ಲು ಪೊಲೀಸ್ ಠಾಣೆಯ ಪ್ರಭಾರ ಠಾಣಾಧಿಕಾರಿ ಗೋಪಾಲಕೃಷ್ಣ,ನಾಪೋಕ್ಲು ಗ್ರಾ.ಪಂ.ಉಪಾಧ್ಯಕ್ಷ ಮಹಮ್ಮದ್, ಸದಸ್ಯ ಸಾಬಾ ತಿಮ್ಮಯ್ಯ, ನಾಪೋಕ್ಲು ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್, ಉಪಾಧ್ಯಕ್ಷ ನಾಗರಾಜ್,ಎಮ್ಮೆಮಾಡು ಗ್ರಾ. ಪಂ. ಮಾಜಿ ಅಧ್ಯಕ್ಷ ಆಲಿ ಕುಟ್ಟಿ, ಎಮ್ಮೆಮಾಡು ಗ್ರಾ.ಪಂ. ಸದಸ್ಯರಾದ ಗಫೂರ್, ಯೂಸುಫ್,ಭಜರಂಗ ದಳದ ರಾಧಾಕೃಷ್ಣ ರೈ,ಪ್ರವೀಣ್,ಆಟೋ ಚಾಲಕರು, ವರ್ತಕರು, ಠಾಣೆಯ ಸಿಬ್ಬಂದಿಗಳು ಮತ್ತಿತರರು ಹಾಜರಿದ್ದರು.
ವರದಿ :ಝಕರಿಯ ನಾಪೋಕ್ಲು