ಸೋಮವಾರಪೇಟೆ ಫೆ.23 : ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಮಾ.1ರಿಂದ ಕರೆದಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸೋಮವಾರಪೇಟೆ ತಾಲೂಕು ಘಟಕ ಸಂಪೂರ್ಣ ಬೆಂಬಲ ನೀಡಲು ನಿರ್ಣಯ ಕೈಗೊಂಡಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ಪ್ರದೀಪ್ ಹೇಳಿದರು.
ರಾಜ್ಯ ಸರಕಾರಿ ನೌಕರರ ವೇತನ ಭತ್ಯೆ ಇದೂವರೆಗೆ ಪರಿಷ್ಕರಣೆ ಆಗಿಲ್ಲ. 6ನೇ ವೇತನ ಆಯೋಗದ ಅವಧಿ 2022ರ ಜುಲೈ 1ಕ್ಕೆ ಮುಗಿದಿದೆ. ಆದರೆ ರಾಜ್ಯದಲ್ಲಿ ಇನ್ನೂ 7ನೇ ವೇತನ ಆಯೋಗ ಜಾರಿ ಆಗಿಲ್ಲ. ಸುಮಾರು 22 ರಾಜ್ಯಗಳಲ್ಲಿ ಕಾಲಕಾಲಕ್ಕೆ ವೇತನ ಪರಿಷ್ಕರಣೆ ಆಗಿದೆ. ರಾಜ್ಯ ಅಭಿವೃದ್ಧಿಯಲ್ಲಿ ದೇಶಕ್ಕೆ 5ನೆ ಸ್ಥಾನದಲ್ಲಿದ್ದರೂ ಸರಕಾರಿ ನೌಕರರ ಹಿತ ಕಾಪಾಡಲು ಮುಂದಾಗಿಲ್ಲ. ಈ ಬಾರಿಯ ಆಯವ್ಯಯದಲ್ಲೂ ವೇತನ ಪರಿಷ್ಕರಣೆಗೆ ಹಣವನ್ನು ಮೀಸಲಿಟ್ಟಿಲ್ಲ. ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಗಣಿಸಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ.40 ಫಿಟ್‌ಮೆಂಟ್ ಸೌಲಭ್ಯವನ್ನು ನೀಡಬೇಕು ಎಂದರು.
ನೆರೆಯ ಕೇರಳ ರಾಜ್ಯದಲ್ಲಿ 11ನೇ ವೇತನ ಆಯೋಗ, ತಮಿಳುನಾಡಿನಲ್ಲಿ 10ನೇ ವೇತನ ಆಯೋಗ ಜಾರಿಯಲ್ಲಿದೆ. ಕರ್ನಾಟಕದಲ್ಲಿ 7 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರು ಇರಬೇಕಾಗಿದ್ದು, 5ಲಕ್ಷ ನೌಕರರು ಮಾತ್ರ ಇದ್ದು ಹೆಚ್ಚವರಿಯಾಗಿ ಕೆಲಸ ಮಾಡುತ್ತಿದ್ದರೂ ಸರ್ಕಾರಗಳು ನಿರ್ಲಕ್ಷ್ಯ ಮಾಡುತ್ತಿವೆ. ಇಡೀ ದೇಶದಲ್ಲಿ ಅತೀ ಕನಿಷ್ಠ ಸಂಬಳವನ್ನು ಇಲ್ಲಿಯ ನೌಕರರು ಪಡೆಯುತ್ತಿದ್ದಾರೆ. ಕೆಲವೊಂದು ರಾಜ್ಯಗಳಲ್ಲಿ ಕೇಂದ್ರ ಸರ್ಕಾರಿ ನೌಕರರು ಪಡೆಯುವಷ್ಟು ವೇತನವನ್ನು ಅಲ್ಲಿನ ರಾಜ್ಯ ಸರ್ಕಾರಿ ನೌಕರರು ಪಡೆಯುತ್ತಿದ್ದಾರೆ. ರಾಜ್ಯದ ನೌಕರರಿಗೆ ಮರಣ ಶಾಸನದಂತಿರುವ ಎನ್.ಪಿ.ಎಸ್ ನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಕೆ.ಎಸ್.ಪ್ರಸನ್ನ, ಕಾರ್ಯದರ್ಶಿ ಎನ್.ಎಂ.ನಾಗೇಶ್, ಖಜಾಂಚಿ ವಿ.ಜಿ.ದಿನೇಶ್, ಸಂಘಟನಾ ಕಾರ್ಯದರ್ಶಿ ಗೋಪಿನಾಥ್, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಪಿ.ಧರ್ಮಪ್ಪ ಇದ್ದರು.