ನಾಪೋಕ್ಲು ಫೆ.24 : ಕೊಡಗು ಪ್ರಕೃತಿ ಸೌಂದರ್ಯದ ಜಿಲ್ಲೆ. ಅದರಲ್ಲೂ ಮಡಿಕೇರಿ ತಾಲೂಕು ನಾಲ್ಕು ನಾಡಿನ ಎಮ್ಮೆಮಾಡು ಗ್ರಾಮವು ಜೀವನದಿ ಕಾವೇರಿಯ ದಡದಲ್ಲಿದ್ದು, ದಕ್ಷಿಣ ಭಾರತ, ದಕ್ಷಿಣ ಕರ್ನಾಟಕದ ಮುಸ್ಲಿಂ ಪುಣ್ಯ ಕ್ಷೇತ್ರಗಳ ಪೈಕಿ ಎಮ್ಮೆಮಾಡು ಗ್ರಾಮಕ್ಕೆ ಅಗ್ರಸ್ಥಾನ ಇದೆ.
ಇಲ್ಲಿ ಸತ್ಯಸಂಧ0ದೈವ ಭಕ್ತ ಪವಾಡ ಪುರುಷ ಸೂಫಿ ಸಯ್ಯದ್ ವಲಿಯುಲ್ಲಾರವರು ಈ ಸ್ಥಳದಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವುದೇ ಈ ಸ್ಥಳದ ಕೀರ್ತಿ, ಪ್ರಸಿದ್ಧಿಗೆ ಕಾರಣ.
ಜಿಲ್ಲಾ ಕೇಂದ್ರ ಮಡಿಕೇರಿಯಿಂದ ನಾಪೋಕ್ಲುವಿಗಾಗಿ ಸುಮಾರು 32 ಕಿ.ಮೀ. ಚಲಿಸಿದರೆ, ಈ ಗ್ರಾಮಕ್ಕೆ ತಲುಪಬಹುದು. ವಾರ್ಷಿಕವಾಗಿ ಇಲ್ಲಿ ಮಾರ್ಚ್ ತಿಂಗಳಲ್ಲಿ ಊರೂಸ್ ಜರುಗಲಿದ್ದು, ಇಂದು ಧ್ವಜಾರೋಣದ ಮೂಲಕ ಚಾಲನೆ ದೊರೆಯಿತು. ಫೆ. 27 ರಂದು ಸರ್ವಧರ್ಮ ಸಮ್ಮೇಳನ ಮತ್ತು ಅನ್ನದಾನ ನಡೆಯಲಿದ್ದು, ಮಾ.3 ರಂದು ಹಬ್ಬಕ್ಕೆ ತೆರೆ ಬಿಳಲಿದೆ.
ಇತಿಹಾಸ : ನೂರಾರು ವರ್ಷಗಳ ಹಿಂದೆ ಸೂಫಿ-ಸಯ್ಯದ್ ರವರು ಮರಣ ಸಯ್ಯೆಯಲ್ಲಿ ಬರಕೊಲ್ಲಿ ಎಂಬ ಜಾಗದಲ್ಲಿ ಬಂಡೆಯ ಮೇಲೆ ಜೀವನ್ ಮರಣ ಸ್ಥಿತಿಯಲ್ಲಿದ್ದ ಸಂದರ್ಭ ನೆಲಜಿ ಗ್ರಾಮದ ಕೊಡವ ಜನಾಂಗಕ್ಕೆ ಸೇರಿದ ಮಣವಟ್ಟೀರ ಕುಟುಂಬದ ಗದ್ದೆಯಲ್ಲಿ ಗೂಟಕ್ಕೆ ಕಟ್ಟಿ ಹಾಕಿದ ಹಸುವೊಂದು ಹಗ್ಗವನ್ನು ತುಂಡರಿಸಿಕೊ0ಡು ಬಂದು ಮರಣ ಸಯ್ಯೆಯಲ್ಲಿದ್ದ ಸೂಫಿ-ಸಯ್ಯದ್ಗೆ ತನ್ನ ಕೆಚ್ಚಲಿನಿಂದ ಹಾಲುಣಿಸಿದ ಚರಿತ್ರೆ ಇದೆ.
ಅದರಂತೆ ಇಂದೂ ಕೂಡ ಎಮ್ಮೆಮಾಡು ಬರಕೊಲ್ಲಿ ಎಂಬ ಜಾಗದಲ್ಲಿ ಕಲ್ಲು ಬಂಡೆಯ ಮೇಲೆ ಹಸು ಹಾಲುಣಿಸಿದ ಕುರುಹು ಆಗಿ ಹಸುವಿನ ಹೆಜ್ಜೆ ಮತ್ತು ಹಗ್ಗದ ಗುರುತನ್ನು ಕಲ್ಲಿನ ಮೇಲೆ ಕಾಣಬಹುದಾಗಿದೆ. ಇದು ಸಹ ಒಂದು ಪ್ರಸಿದ್ಧ ತಾಣವಾಗಿದೆ. ಇಲ್ಲಿ ಗೋ ಹತ್ಯೆಯನ್ನು ನಿಷೇಧಿಸಲಾಗಿದ್ದು, ಗೋಹತ್ಯೆ ಮಾಡಿದವರಿಗೆ ಮಾರಕ ರೋಗ ಬಂದಿರುವ ನಿದರ್ಶಗಳಿವೆ. ಜಾನುವಾರುಗಳಿಗೆ ರೋಗ ಬಂದರೆ ಇಲ್ಲಿಗೆ ಹರಕೆ ಮಾಡಿಕೊಂಡರೆ ಕೂಡಲೇ ರೋಗ ವಾಸಿಯಾಗುತ್ತದೆ ಎಂಬ ಪ್ರತೀತಿ ಇದೆ.
ಅಹ್ಲ್ಬೈತ್-ಆದೂರ್-ತಂಞಳ್ : ನೂರಾರು ವರ್ಷಗಳ ಹಿಂದೆ ಮಹಮ್ಮದ್ ಪೈಗಂಬರ್ರವರ ವಂಶಸ್ಥರಾದ ಆದೂರಿನ ಸಯ್ಯದ್-ಹಸನ್-ಸಖಾಫಿಲ್ಲ್-ಅಲ್ಲರಮ್ಮಿ-ತಂಞಳ್ರವವರು ಸೂಫಿ ಸಯ್ಯದ್ ಅವರ ದರ್ಗಾ ಶರೀಫ್ಗೆ ಸಂದರ್ಶಕರಾಗಿ ಬಂದಿದ್ದ ಸಂದರ್ಭ, ವೃದ್ಧರಾದ ಇವರು ನನಗೆ ನಿಮ್ಮೊಂದಿಗೆ ಅಂತಿಮ ವಿಶ್ರಾಂತಿಗೆ ಸ್ಥಳವಕಾಶ ಕಲ್ಪಿಸಿ ಎಂದು ಸೂಫಿ-ಸಯ್ಯದ್-ವಲಿಯುಲ್ಲಾ ಕೋರಿಕೊಂಡರ0ತೆ. ತಂಞಳ್ ಅವರ ಕೋರಿಕೆಯನ್ನು ಮನ್ನಿಸಿದ ಸೂಫಿ-ಸಯ್ಯದ್ ಅಲ್ಲರಮ್ಮಿ ತಂಞಳ್ಗೆ ಎತ್ತರದ ದೇವಸ್ಥಾನ ನೀಡಿ ಗೌರವಿಸಿದ್ದಾರೆ. ಇಂದು ಕೂಡ ದರ್ಗಾ ಶರೀಫ್ಗೆ ಮೆಟ್ಟಿಲಿಳಿದು ಸಾಗುವಾಗ ಮೊದಲು ದೊರಕುವ ಕಟ್ಟಡವೇ ಅಲ್ಲರಮ್ಮಿ ತಂಞಳ್ ಅವರ ದರ್ಗಾ ಶರೀಫ್.
ವರ್ಷದ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ವಾರ್ಷಿಕ ಊರೂಸ್ ಸಮಾರಂಭ ನಡೆಯಲಿದ್ದು, ಈ ಭಾರಿ ಪೆಬ್ರವರಿ ತಿಂಗಳಲ್ಲಿ ಉರೂಸ್ ನಡೆಯಲಿದೆ. ಇಲ್ಲಿಗೆ ದೇಶ ವಿದೇಶಗಳಿಂದ, ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಲಕ್ಷಾಂತರ ಜನರು ಜಾತಿ, ಬೇಧ ಮರೆತು ಆಗಮಿಸಿ ತಮ್ಮ ಸಂಕಷ್ಟಗಳನ್ನು ಪರಿಹರಿಸಲು ದರ್ಗಾ ಶರೀಫ್ ಬಳಿ ಬಂದು ಇಷ್ಟಾರ್ಥ ಸಿದ್ದಿಗೆ ಬೇಡಿಕೊಂಡು ಹರಕೆ ಕಾಣಿಕೆಯನ್ನು ಸಹ ಒಪ್ಪಿಸುತ್ತಾರೆ.
ಎಮ್ಮೆಮಾಡು ತಾಜುಲ್-ಇಸ್ಲಾಂ-ಮುಸ್ಲಿ0 ಜಮಾಯತ್ ದರ್ಗಾ ಶರೀಫ್ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳಿಗೆ ಧಾರ್ಮಿಕ ವಿದ್ಯಾಭ್ಯಾಸ, ಅರಬ್ಬಿ ಶಾಲೆ, ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿರುವುದು ಸಂತಸದ ವಿಷಯವಾಗಿದೆ. ಇಲ್ಲಿ ಬಡ ಮಕ್ಕಳ ಅನಾಥಾಲಯ ಸಹ ಇದ್ದು, ಅವರಿಗೆ ಉಚಿತ ವಸತಿ, ಊಟ, ವಿದ್ಯಾಭ್ಯಾಸವನ್ನು ನೀಡಲಾಗುತ್ತಿದೆ.
ವರದಿ : ದುಗ್ಗಳ ಸದಾನಂದ