ಮಡಿಕೇರಿ ನ.22 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ವತಿಯಿಂದ ನ.29 ರಂದು ಮೂರ್ನಾಡುವಿನಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದು ಕ.ಸಾ.ಪ ಮೂರ್ನಾಡು ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತೂರು ಮೂರ್ನಾಡು ಗ್ರಾ.ಪಂ, ಪಿ.ಎಂ ಶ್ರೀ ಸರಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಮೂರ್ನಾಡು ಹೋಬಳಿ ಘಟಕದ ವಿವಿಧ ಶಾಲೆ, ಕಾಲೇಜು, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪಿ.ಎಂ ಶ್ರೀ ಸರಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು. ಬೆಳಿಗ್ಗೆ 11 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ.ಸಾ.ಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಹಾಗೂ ಖ್ಯಾತ ಮಕ್ಕಳ ತಜ್ಞ ಡಾ.ನವೀನ್ ಕುಮಾರ್ ಪಾಲ್ಗೊಳ್ಳಲಿದ್ದಾರೆ. ಅತಿಥಿಗಳಾಗಿ ಕ.ಸಾ.ಪ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ವೈದ್ಯರಾದ ಡಾ.ಕುಂಞ ಅಬ್ದುಲ್ಲಾ, ಖ್ಯಾತ ಇ.ಎನ್.ಟಿ ವೈದ್ಯ ಡಾ.ಮೋಹನ್ ಅಪ್ಪಾಜಿ, ನಿವೃತ್ತ ಶಿಕ್ಷಕಿ ಬಾಚೆಟ್ಟಿರ ಕಮಲ ಮುದ್ದಯ್ಯ, ಕ.ಸಾ.ಪ ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಬಿ.ಎಸ್.ಕುಶನ್ ರೈ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಆಡಳಿತಾಧಿಕಾರಿ ಅಕ್ಷತಾ ಬಿ.ಶೆಟ್ಟಿ ಭಾಗವಹಿಸಲಿದ್ದಾರೆ. ಮೂರ್ನಾಡು ಹೋಬಳಿ ಘಟಕದ ಕ.ಸಾ.ಪ ಸ್ಥಾಪಕಾಧ್ಯಕ್ಷ ಡಾ.ಸುಭಾಷ್ ನಾಣಯ್ಯ, ನಿಕಟ ಪೂರ್ವ ಅಧ್ಯಕ್ಷ ಸುಕುಮಾರ್, ಕಸಾಪ ಜಿಲ್ಲಾ ಗೌರವ ಕೋಶಾಧಿಕಾರಿ ಸಂಪತ್ ಕುಮಾರ್, ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ವಿಜಯಕುಮಾರ್, ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾವತಿ, ಎಲ್ಲಾ ಶಾಲಾ, ಕಾಲೇಜುಗಳ ಪ್ರಾಂಶುಪಾಲರು ಹಾಗೂ ಶಿಕ್ಷಕರು ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಉಳುವಂಗಡ ಕಾವೇರಿ ಉದಯ ಅವರ “ಪವಿತ್ರ ಪ್ರೀತಿ ಪ್ರಾಪ್ತಿ” ಪುಸ್ತಕವನ್ನು ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಬಿಡುಗಡೆ ಮಾಡಲಿದ್ದಾರೆ.
:: ಮೆರವಣಿಗೆ :: ಅಂದು ಬೆಳಿಗ್ಗೆ 8 ಗಂಟೆಗೆ ಮೂರ್ನಾಡು ವಿದ್ಯಾಸಂಸ್ಥೆಯಿಂದ ಮೂರ್ನಾಡು-ಕೊಂಡಂಗೇರಿ ವೃತ್ತದವರೆಗೆ ಮೆರವಣಿಗೆ ಸಾಗಲಿದ್ದು, ನಂತರ ಪಿ.ಎಂ ಶ್ರೀ ಸರಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊನೆಗೊಳ್ಳಲಿದೆ. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಗಮನ ಸೆಳೆಯಲಿದೆ. ಮೆರವಣಿಗೆಯನ್ನು ಹಿರಿಯ ಸಾಹಿತಿ ನಾಗೇಶ್ ಕಾಲೂರು ಹಾಗೂ ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್ ಉದ್ಘಾಟಿಸಲಿದ್ದು, ಮೂರ್ನಾಡು ಹೋಬಳಿ ಘಟಕದ ಪದಾಧಿಕಾರಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಎನ್.ಸಿ.ಸಿ, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರಧ್ವಜವನ್ನು ಕಾಂತೂರು ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಬಿ.ಎಸ್.ಕುಶನ್ ರೈ ಹಾಗೂ ಕನ್ನಡ ಧ್ವಜವನ್ನು ಕೊಡಗು ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಪ್ರೌಢಶಾಲೆಯ 51 ವಿದ್ಯಾರ್ಥಿಗಳು ನಾಡಗೀತೆ ಹಾಡಲಿದ್ದು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಕನ್ನಡ ನಾಡು ನುಡಿಗೆ ಸಂಬಂಧಿಸಿದ ನೃತ್ಯ, ಸ್ಟೆಪ್ ಅಪ್ ಶ್ಯಾಡೋ ತಂಡದಿಂದ ನೃತ್ಯ ವೈಭವ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಕಾರ್ಯಕ್ರಮದ ನಿರ್ವಹಣೆಗೆ ಸಮಿತಿ ರಚನೆ ಮಾಡಲಾಗಿದ್ದು, ಮೂರ್ನಾಡು ನಕ್ಷತ್ರ ಆಟೋ ಮಾಲೀಕರ ಹಾಗೂ ಚಾಲಕರ ಸಂಘ, ಗಜಾನನ ಸಂಘ, ಅಯ್ಯಪ್ಪ ಯುವಕ ಮಂಡಳಿ, ಆಪ್ತಮಿತ್ರ ಸಂಘ, ಟೈಲರ್ ಅಸೋಸಿಯೇಷನ್, ಮಲಯಾಳಿ ಸಮುದಾಯ, ಕೊಡವ ಸಮುದಾಯ, ಗೌಡ ಸಮುದಾಯ, ಮುಸ್ಲಿಂ ಯುವಕ ಸಂಘ, ಫ್ರೆಂಡ್ಸ್ ವಾಹನ ಮಾಲೀಕರ ಹಾಗೂ ಚಾಲಕರ ಸಂಘ, ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ, ಮೂರ್ನಾಡು ಹೋಬಳಿ ಘಟಕದ ವಿವಿಧ ಸಮಾಜಗಳು, ಸಂಘ-ಸಂಸ್ಥೆಗಳು, ಶಾಲಾ, ಕಾಲೇಜುಗಳು, ಮೂರ್ನಾಡು ಗ್ರಾಮಸ್ಥರು, ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು ಕೈಜೋಡಿಸಿದ್ದಾರೆ ಎಂದು ಹರಿಣಿ ವಿಜಯ್ ಮಾಹಿತಿ ನೀಡಿದರು. ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗೆ ಸಂಬಂಧಪಟ್ಟ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಕಾಂತೂರು ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಬಿ.ಎಸ್.ಕುಶನ್ ರೈ ಹಾಗೂ ಮೂರ್ನಾಡು ಮುಸ್ಲಿಂ ಯುವಕ ಸಂಘದ ಅಧ್ಯಕ್ಷ ಕೆ.ಎಂ.ಖಾದರ್ ಮಾತನಾಡಿ ಕನ್ನಡ ಹಬ್ಬದಲ್ಲಿ ಸರ್ವರೂ ಪಾಲ್ಗೊಳ್ಳುವಂತೆ ಕೋರಿದರು. ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯ ಹಾಗೂ ಮಾಜಿ ಉಪಾಧ್ಯಕ್ಷ ಮುಂಡಂಡ ವಿಜು ತಿಮ್ಮಯ್ಯ ಹಾಗೂ ಕ.ಸಾ.ಪ ಮೂರ್ನಾಡು ಹೋಬಳಿ ಘಟಕದ ಗೌರವ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷ್ಮಿ ಉಪಸ್ಥಿತರಿದ್ದರು.