ಸೋಮವಾರಪೇಟೆ ಫೆ.24 : ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವಿನ ವಾಕ್ ಸಮರ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೋಲಾಹಲವನ್ನು ಸೃಷ್ಟಿಸಿತು. ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದ ಸಭೆಯಿಂದ ಕೆಲವರು ಹೊರನಡೆದರು. ಆಡಳಿತ ಪಕ್ಷದ ಸದಸ್ಯರೇ ಸಮಸ್ಯೆಗಳ ಸರಮಾಲೆಯನ್ನು ಸಭೆಯಲ್ಲಿ ಮಂಡಿಸಿದ ಪ್ರಸಂಗವೂ ನಡೆಯಿತು.
ಪಂಚಾಯಿತಿಯಿoದ ಸರಬರಾಜಾಗುತ್ತಿರುವ ಕುಡಿಯುವ ನೀರು ಕಲುಷಿತಗೊಂಡಿದೆ ಎಂಬ ವಿಷಯದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭ ವಿಪಕ್ಷ ಸದಸ್ಯರ ಹಾಗೂ ಅಧ್ಯಕ್ಷರ ನಡುವೆ ವಾಗ್ದಾದ ನಡೆದು, ವಿಪಕ್ಷದ ಕೆಲವು ಸದಸ್ಯರು ಸಭೆಯನ್ನೇ ಬಹಿಷ್ಕರಿಸಿ ಹೊರ ನಡೆದರು.
ಪಂಚಾಯಿತಿ ಅಧ್ಯಕ್ಷ ಪಿ.ಕೆ.ಚಂದ್ರು ಅವರ ಅಧ್ಯಕ್ಷತೆಯಲ್ಲಿ ತಡವಾಗಿ ಸಭೆ ಪ್ರಾರಂಭವಾಗುತ್ತಿದ್ದAತೆ, ವಿಪಕ್ಷ ಸದಸ್ಯ ಜೀವನ್ ಪಂಚಾಯಿತಿ ವಿರುದ್ಧ ದೂರಿನ ಸುರಿಮಳೈಗೈದರು. ಇತರ ವಿಷಯಗಳಲ್ಲಿ ವಿಷಯವನ್ನು ಚರ್ಚಿಸೋಣ, ಅಜೆಂಡದoತೆ ಸಭೆ ನಡೆಸೋಣ ಎಂದು ಅಧ್ಯಕ್ಷರು ಮನವಿ ಮಾಡಿದರು. ಮನವಿಗೆ ಕಿವಿಗೊಡದೆ ಜೀವನ್ ಪಂಚಾಯಿತಿ ಆಡಳಿತ ವೈಖರಿಯನ್ನು ಖಂಡಿಸಿ, ಕಳೆದ ನಾಲ್ಕು ತಿಂಗಳಿನಿoದ ಕಲುಷಿತ ನೀರನ್ನೇ ಸರಬರಾಜು ಮಾಡುತ್ತಿದ್ದಿರಿ, ಜನರ ಆರೋಗ್ಯಕ್ಕೆ ತೊಂದರೆಯಾದರೆ ಯಾರು ಜವಾಬ್ದಾರಿ ಹೊರಬೇಕು. ಕಳೆದ ನಾಲ್ಕು ತಿಂಗಳ ನೀರಿನ ತೆರಿಗೆಯನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಶಾಸಕರ ಅನುದಾನದಲ್ಲಿ ನೀರು ಶುದ್ಧೀಕರಣ ಘಟಕಕ್ಕೆ 30 ಲಕ್ಷ ರೂ. ಖರ್ಚು ಮಾಡಲಾಗಿದೆ. ಆದರೂ ನೀರು ಶುದ್ಧೀಕರಣವಾಗುತ್ತಿಲ್ಲ ಎಂದು ಉಪಾಧ್ಯಕ್ಷ ಬಿ.ಸಂಜೀವ ಹಾಗು ಶೀಲಾ ಡಿಸೋಜ ತರಾಟೆಗೆ ತೆಗೆದುಕೊಂಡರು.
ಕಸವಿಲೇವಾರಿ ಘಟಕ ಕಾಮಗಾರಿ ಪೂರ್ಣಗೊಳಿಸದೆ, ಹೈಟೆಕ್ ಮಾರುಕಟ್ಟೆ ಸುತ್ತ ಕಸ ಹಾಕಿ ಸುಡಲಾಗುತ್ತಿದೆ. ಇದರಿಂದ ಪರಿಸರ ಮಾಲೀನ್ಯವಾಗುತ್ತಿವೆ. ಪಂಚಾಯಿತಿ ಕಚೇರಿಯಲ್ಲಿ ರಾಜಕೀಯ ಪ್ರಭಾವ ಬಳಸಿ ಹೆಚ್ಚುವರಿ ಸಿಬ್ಬಂದಿಗಳನ್ನು ತೆಗೆದುಕೊಳ್ಳಲಾಗಿದೆ. ಕೆಲವರು ಕೆಲಸವನ್ನೇ ಮಾಡುತ್ತಿಲ್ಲ. ಜನರ ತೆರಿಗೆ ಹಣದಿಂದ ಸಂಬಳ ನೀಡಲಾಗುತ್ತಿದೆ. ಪಂಚಾಯಿತಿಗೆ ಬಂದವರಿಗೆ ನಿಗದಿತ ಸಮಯದಲ್ಲಿ ಕೆಲಸ ಮಾಡಿಕೊಡುತ್ತಿಲ್ಲ ಎಂದು ಜೀವನ್ ದೂರಿದರು.
ಇದೇ ಸಂದರ್ಭದಲ್ಲಿ ನಾಮ ನಿರ್ದೇಶಿತ ಸದಸ್ಯ ಎಸ್.ಮಹೇಶ್, ಪಂಚಾಯಿತಿಗೆ ಸರ್ವೆಯರ್ ನೇಮಕವಾಗಿಲ್ಲ. ಟ್ರಾಫಿಕ್ ಸಮಸ್ಯೆ ಬಗೆಹರಿದಿಲ್ಲ, ಸಿ.ಸಿ.ಕ್ಯಾಮೆರಾ ರಿಪೇರಿಯಾಗಿಲ್ಲ. ಹೊಸಬಡಾವಣೆಯಲ್ಲಿ ನಿವೇಶನಗಳ ಹಕ್ಕುಪತ್ರಗಳನ್ನು ಪರಿಶೀಲನೆ ಮಾಡಿಲ್ಲ ಈ ಹಿಂದೆಯೇ ಸಭೆಯಲ್ಲಿ ಚರ್ಚಿಸಿದ ವಿಷಯಗಳು ಕಾರ್ಯರೂಪಕ್ಕೆ ತಂದಿಲ್ಲ ಎಂದು ಆಡಳಿತ ವೈಖರಿಯನ್ನು ಟೀಕಿಸಿದರು.
ನೀವೇನೂ ವಿಪಕ್ಷ ಸದಸ್ಯರೇ ಎಂದು ಅಧ್ಯಕ್ಷ ಪಿ.ಕೆ.ಚಂದ್ರು ಕುಟುಕಿದರು. ಪಂಚಾಯಿತಿ ಸಭೆಯಲ್ಲಿ ಅಭಿವೃದ್ಧಿ ಬಗ್ಗೆ ಮಾತ್ರ ಚರ್ಚೆ ಮಾಡಬೇಕು. ಒಡೆದು ಆಳುವ ನೀತಿಯನ್ನು ಅಧ್ಯಕ್ಷರು ಬಿಡಬೇಕು. ಅಧ್ಯಕ್ಷರ ಕುರ್ಚಿಗೆ ಗೌರವ ಕೊಡಬೇಕು ಎಂದು ಮಹೇಶ್ ತಿರುಗೇಟು ನೀಡಿದರು.
ವಾಗ್ದಾದಗಳು ಹೆಚ್ಚಾದಂತೆ ಬಿಜೆಪಿ ಸದಸ್ಯ ಬಿ.ಆರ್. ಮಹೇಶ್, ಇಷ್ಟವಿಲ್ಲದವರು ಸಭೆಯಿಂದ ಹೊರಹೋಗಿ ಎಂದು ಹೇಳಿದರು. ಇದರಿಂದ ರೊಚ್ಚಿಗೆದ್ದ ವಿಪಕ್ಷ ಸದಸ್ಯರಾದ ಶೀಲಾ ಡಿಸೋಜ, ಜೀವನ್, ಸಂಜೀವ, ಬಿ.ಸಿ. ವೆಂಕಟೇಶ್, ಮಹೇಶ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಪಂಚಾಯಿತಿ ಯಾರೊಬ್ಬರ ಸ್ವತ್ತು ಅಲ್ಲ, ನೀವು ಯಾರು ಹೊರಹೋಗಿ ಎಂದು ಹೇಳಲು ಎಂದು ಪ್ರಶ್ನಿಸಿದರು. ಶುಭಾಕರ್ ಹಾಗೂ ಮಹೇಶ್ ನಡುವೆ ತಳ್ಳಾಟವು ನಡೆಯಿತು. ಈ ಸಂದರ್ಭ ಸಂಜೀವ ಅವರು ಕುರ್ಚಿಯನ್ನು ಎತ್ತಿಕೊಂಡರು.
ಆಡಳಿತ ಪಕ್ಷದ ಎಸ್.ಆರ್.ಸೋಮೇಶ್, ಮೃತ್ಯುಂಜಯ, ಶರತ್‌ಚಂದ್ರ ಮತ್ತಿತರರು ಸಮಧಾನ ಪಡಿಸುವ ಪ್ರಯತ್ನ ಮಾಡಿದರೂ, ನಾಲ್ವರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ನಂತರ ಮುಂದುವರಿದ ಸಭೆಯಲ್ಲಿ ಜೆಡಿಎಸ್ ಬೆಂಬಲಿತ ಜಯಂತಿ ಶಿವಕುಮಾರ್, ನಾಗರತ್ನ ಸಭೆಯಲ್ಲಿ ಭಾಗವಹಿಸಿ, ಚರ್ಚೆಗೆ ಗ್ರಾಸವಾದರು.
ವರ್ಕ್ಶಾಪ್ ಏರಿಯಾದಲ್ಲಿ ವ್ಯಕ್ತಿಯೋರ್ವರು ನಕಲಿ ದಾಖಲೆ ಸೃಷ್ಟಿಸಿಕೊಂಡಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಪೊಲೀಸ್ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಸದಸ್ಯರ ಪ್ರಶ್ನೆಗೆ ಮುಖ್ಯಾಧಿಕಾರಿ ನಾಚಪ್ಪ ಉತ್ತರಿಸಿದರು.
ಪಟ್ಟಣದ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕಾಗಿದ್ದ ವಿಪಕ್ಷ ಸದಸ್ಯರು ರಾಜಕೀಯ ದುರುದ್ದೇಶದಿಂದ ಸಭೆ ಬಹಿಷ್ಕರಿಸಿ ತೆರಳಿದ್ದಾರೆ. ಇದು ಪೂರ್ವ ನಿಯೋಜಿತವಾಗಿದೆ. ಕಸ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರದ ಅಮೃತ್ ಯೋಜನೆಯಲ್ಲಿ ಹಾರಂಗಿಯಿAದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಗೆ 13 ಕೋಟಿ ರೂ.ಗಳು ಬಿಡುಗಡೆಯಾಗಿದೆ. ಮುಂದಿನ 1 ವರ್ಷದೊಳಗೆ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ.
-ಪಿ.ಕೆ.ಚಂದ್ರು, ಅಧ್ಯಕ್ಷ, ಪಟ್ಟಣ ಪಂಚಾಯಿತಿ.
ಪಟ್ಟಣದ ಅಭಿವೃದ್ಧಿಯ ಬಗ್ಗೆ ಚರ್ಚಿಸುತ್ತಿದ್ದ ಸಂದರ್ಭದಲ್ಲೇ, ಆಡಳಿತ ಪಕ್ಷದ ಸದಸ್ಯರೊಬ್ಬರು ವಿಪಕ್ಷ ಸದಸ್ಯರಿಗೆ ಸಭೆಯಿಂದ ಹೊರನಡೆಯಿರಿ ಎಂದು ಅವಮಾನಿಸಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಅಭಿವೃದ್ಧಿ ಬಗ್ಗೆ ಚರ್ಚಿಸಲು ಅಡಳಿತ ಪಕ್ಷದ ಸದಸ್ಯರು ಅವಕಾಶ ನೀಡುತ್ತಿಲ್ಲ. ಅನುದಾನವನ್ನು ಎಲ್ಲಾ ವಾರ್ಡ್ಗಳಿಗೆ ಸಮನಾಗಿ ಹಂಚಿಕೆ ಮಾಡುತ್ತಿಲ್ಲ.ಕಲುಷಿತ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ.
-ಬಿ.ಸಂಜೀವ, ಉಪಾಧ್ಯಕ್ಷ, ಪಟ್ಟಣ ಪಂಚಾಯಿತಿ.