ನಾಪೋಕ್ಲು ಫೆ.25 : ನಾಪೋಕ್ಲು ಗ್ರಾ.ಪಂ ಗೆ ಒಳಪಟ್ಟ ಕೋಟೇರಿ-ಬೊಮ್ಮಂಜಿಕೇರಿ ಗ್ರಾಮಕ್ಕೆ ರೂ.12.70 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಈಗಾಗಲೇ ನಾಪೋಕ್ಲು ಗ್ರಾ.ಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ವಿವಿಧ ಯೋಜನೆ ಅಡಿಯಲ್ಲಿ ಸುಮಾರು 1.30 ಕೋಟಿ ರೂ ಗಳು ಬಿಡುಗಡೆಯಾಗಿದೆ. ಇದರಲ್ಲಿ ಕೆಲವು ರಸ್ತೆಗಳ ಕಾಮಗಾರಿ ನಡೆಯುತ್ತಿದ್ದು, ಬಾಕಿ ಉಳಿದಿರುವ ರಸ್ತೆಗಳ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದು ಬೋಪಯ್ಯ ತಿಳಿಸಿದರು.
ಈ ಸಂದರ್ಭ ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಬಿಜೆಪಿ ಮಡಿಕೇರಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ, ತಾಲ್ಲೂಕು ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ತಾಲೂಕು ಕೃಷಿ ಮೋರ್ಚಾದ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್, ಗ್ರಾ.ಪಂ ಸದಸ್ಯೆ ಕೋಟೆರ ನೀಲಮ್ಮ, ಪ್ರಮುಖರಾದ ಅಪ್ಪಾರಂಡ ಅಪ್ಪಯ್ಯ, ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ, ನಾಪೋಕ್ಲು ಗ್ರಾಹಕರ ಸಂಘದ ಅಧ್ಯಕ್ಷ ಪಟ್ರಪಂಡ ಮೋಹನ್ ಮುದ್ದಪ್ಪ, ಬಿದ್ದಾಟಂಡ ಸಂಪತ್, ಪುಲ್ಲೇರ ವಿಠಲ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಚ್ಚಾಂಡಿರ ಸಾಬು, ನಾಪೋಕ್ಲು ಗ್ರಾ.ಪಂ ಅಭಿಯಂತರ ಅಶೋಕ್, ಗುತ್ತಿಗೆದಾರ ಮೈಸೂರಿನ ಮಂಜುನಾಥ್ ಸೇರಿದಂತೆ ಮತ್ತಿತರ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.
ಪೂಜಾ ವಿಧಿವಿಧಾನಗಳನ್ನು ಮೂಟೇರಿ ಉಮಾಮಹೇಶ್ವರಿ ದೇವಾಲಯದ ಅರ್ಚಕರಾದ ಕೀರ್ತಿಭಟ್ ನೆರವೇರಿಸಿದರು.
ವರದಿ :ಝಕರಿಯ ನಾಪೋಕ್ಲು