ಮಡಿಕೇರಿ ಫೆ.27 : ಯುವ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರಕಾರ (ministry of education:PM yuva mentorship scheme) ದೇಶದಾದ್ಯಂತ ಉತ್ಸಾಹಿ ಯುವ ಬರಹಗಾರರನ್ನು ಆಯ್ಕೆ ಮಾಡಿದ್ದು,ಕೊಡಗಿನ ಯುವ ಬರಹಗಾರ್ತಿ ಆಲಿಯಾ ಚೋಂದಮ್ಮ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ದೇಶದಾದ್ಯಂತ ಒಟ್ಟು 75 ಯುವ ಬರಹಗಾರರನ್ನು ಕೇಂದ್ರ ಸರಕಾರ ಆಯ್ಕೆ ಮಾಡಿದ್ದು, ಕರ್ನಾಟಕದಿಂದ ಆಯ್ಕೆಗೊಂಡ ಮೂವರಲ್ಲಿ ಕೊಡಗಿನ ಆಲಿಯಾ ಚೋಂದಮ್ಮ ಇಡೀ ದೇಶದಲ್ಲೇ ಅತೀ ಕಿರಿಯ ವಯಸ್ಸಿನ (16 ವರ್ಷ) ಬರಹಗಾರ್ತಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ.
ಆಲಿಯಾ ಚೋಂದಮ್ಮ ಜಿಲ್ಲೆಯ ಕಾಕೋಟು ಪರಂಬುವಿನ ಮೇವಡ ಅಯ್ಯಣ್ಣ ಹಾಗೂ ಚೇಂದಂಡ(ಹೊಸೂರು) ಮೀನಾಕ್ಷಿ ದಂಪತಿಯ ಪುತ್ರಿ. ಗೋಣಿಕೊಪ್ಪಲಿನ ಕಾಲ್ಸ್ ವಿದ್ಯಾಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ. ಪೂರೈಸಿ ಪ್ರಸ್ತುತ ಬೆಂಗಳೂರಿನ BETHANYS HIGH ಕಾಲೇಜಿನಲ್ಲಿ 11ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ.
ದೆಹಲಿಯಲ್ಲಿ ಫೆ.25 ರಿಂದ ಮಾ.5 ರ ತನಕ ನಡೆಯುತ್ತಿರುವ 9 ದಿನಗಳ WORLD BOOK FAIR ನಲ್ಲಿ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಆಲಿಯಾ ಚೋಂದಮ್ಮ ಬರೆದಿರುವ “The lost heros of Kodagu” ಪುಸ್ತಕ ಬಿಡುಗಡೆಗೊಂಡಿದೆ. 75 ಯುವ ಬರಹಗಾರರ ಪುಸ್ತಕಗಳನ್ನು ಕೇಂದ್ರ ಸರಕಾರವೇ ಮುದ್ರಣಗೊಳಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದ್ದು, ಆನ್ ಲೈನ್ ಮೂಲಕವೂ ಪುಸ್ತಕಗಳು ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
ಸಂಸದರಾದ ಅನಂತ ಕುಮಾರ್ ಹೆಗ್ಡೆ, ಪ್ರತಾಪ ಸಿಂಹ ಅವರು ದೂರವಾಣಿ ಮೂಲಕ ರಾಜ್ಯದ ಯುವ ಬರಹಗಾರರನ್ನು ಸಂಪರ್ಕಿಸಿ ಹುರಿದುಂಬಿಸಿದ್ದು, ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಮುಂದಿನ ದಿನಗಳಲ್ಲಿ ಅಗತ್ಯವಿರುವ ಎಲ್ಲಾ ಸಹಕಾರಗಳನ್ನು ನೀಡುವುದಾಗಿ ಭರವಸೆ ನೀಡಿರುತ್ತಾರೆ. ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ ಖುದ್ದು ರಾಜ್ಯದ ಯುವ ಬರಹಗಾರರನ್ನು ದೆಹಲಿಯಲ್ಲಿ ಭೇಟಿ ಮಾಡಿ ಹುರಿದುಂಬಿಸಿರುವುದು ತುಂಬ ಸಂತಸವಾಗಿರುವುದಾಗಿ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.