ಮಡಿಕೇರಿ ಫೆ.27 : ಹೊದ್ದೂರು ಗ್ರಾ.ಪಂ ಗೆ ಒಳಪಡುವ ಪಾಲೆಮಾಡು ಗ್ರಾಮಕ್ಕೆ ಸಮಪರ್ಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿ ಬಹುಜನ ಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಮೂರ್ನಾಡಿನಲ್ಲಿ ಪ್ರತಿಭಟನೆ ನಡೆಸಿದರು.
ಮೂರ್ನಾಡಿನ ಸೆಸ್ಕ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಜಮಾಯಿಸಿದ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಬೇಡಿಕೆಯ ಈಡೇರಿಕೆಗಾಗಿ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ಸದ್ಯಸ ಮೊಣಪ್ಪ, ಈ ಭಾಗದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿದ್ದು, ದಿನವಿಡೀ ವಿದ್ಯುತ್ ಕಡಿತದಿಂದ ಶಾಲಾ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ. ಕುಡಿಯುವ ನೀರು ಸರಬರಾಜಿಗೆ ಕೂಡ ತೊಂದರೆಯಾಗುತ್ತಿದ್ದು, ಜನರು ಸಂಕಷ್ಟದ ಬದುಕನ್ನು ಎದುರಿಸುವಂತಾಗಿದೆ ಎಂದರು.
ತಕ್ಷಣವೇ ವಿದ್ಯುತ್ ಕಡಿತ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು.
ಹೊದ್ದೂರು ಗ್ರಾ.ಪಂ ಅಧ್ಯಕ್ಷರಾದ ಕುಸುಮವತಿ, ಪ್ರಮುಖರಾದ ಆನಂದ ಮತ್ತಿತರು ಪಾಲ್ಗೊಂಡಿದ್ದರು. ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಬೇಡಿಕೆಯ ಮನವಿ ಪತ್ರವನ್ನು ಸೆಸ್ಕ್ ಅಭಿಯಂತರ ಪ್ರಕಾಶ್ ಅವರಿಗೆ ಸಲ್ಲಿಸಿದರು.