ವಿರಾಜಪೇಟೆ ಫೆ.27 : ಕೇಂದ್ರ ಮತ್ತು ರಾಜ್ಯ ಸರಕಾರ ಈ ಬಾರಿಯ ಬಜೆಟ್‍ನಲ್ಲಿ ಕೊಡಗನ್ನು ಕಡೆಗಣಿಸಿ ಕಾರ್ಮಿಕರಿಗೆ ಮತ್ತು ರೈತರಿಗೆ ಪ್ರತ್ಯೇಕ ಯೋಜನೆಗಳನ್ನು ಘೋಷಿಸಿಲ್ಲ ಎಂದು ಭಾರತ ಕಮ್ಯುನಿಸ್ಟ್ ಪಕ್ಷ [ಮಾರ್ಕ್ಸ್‌ವಾದಿ]ದ ವತಿಯಿಂದ ವಿರಾಜಪೇಟೆ ಗಡಿಯಾರ ಕಂಬದ ಬಳಿ ಜನಾಂದೋಲನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಪಕ್ಷದ ಪ್ರಮುಖರಾದ ಡಾ. ಐ.ಆರ್.ದುರ್ಗಾಪ್ರಸಾದ್ ಮಾತನಾಡಿ, ಕೊಡಗಿನಲ್ಲಿ ಕೋವಿಡ್-19 ನಂತರ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಕೇಂದ್ರ ಸರಕಾರದ ಹಣಕಾಸು ಮಂತ್ರಿ ಮತ್ತು ರಾಜ್ಯದ ಮುಖ್ಯ ಮಂತ್ರಿಗಳು ಕೊಡಗನ್ನು ಕಡೆಗಣಿಸಿದ್ದಾರೆ. ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕೃಷಿಕರು ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ಸಿಗುತ್ತಿಲ್ಲ. ಆದಾಯ ಕಡಿಮೆ, ಖರ್ಚು ಜಾಸ್ತಿಯಾಗುತ್ತಿದೆ. ಬಜೆಟ್‍ನಲ್ಲಿ ಕಳೆದ ಭಾರಿಗಿಂತ ಕಡಿಮೆ ಅನುದಾನ ನೀಡಿದ್ದಾರೆ. ಕಾರ್ಮಿಕರ ಪರವಾದ ಯಾವುದೆ ಯೋಜನೆಗಳೆ ಇಲ್ಲ. ಈಗಾಗಲೇ 18 ಸಾವಿರ ಜನರನ್ನು ಕಂಪೆನಿ ಉದ್ಯೋಗದಿಂದ ಕೈಬಿಡಲಾಗಿದೆ ಈ ಹಿನ್ನಲೆಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಹೋರಾಟದ ಅನಿವಾರ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಿಪಿಐ[ಎಂ] ಜಿಲ್ಲಾ ಸಮಿತಿಯ ಎ.ಸಿ.ಸಾಬು ಮಾತನಾಡಿ ಬಜೆಟ್‍ನಲ್ಲಿ ಕೊಡಗಿಗೆ ರಸ್ತೆ ಅಭಿವೃದ್ಧಿಗೆ ಮಾತ್ರ ಅನುದಾನ ನೀಡಲಾಗಿದ್ದು ಇನ್ನು ಇತರೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಇಲ್ಲದಂತಾಗಿದೆ ಜನಪ್ರತಿನಿಧಿಗಳಿಗೆ ರಸ್ತೆ ಕಾಮಗಾರಿಯಲ್ಲಿ ಮಾತ್ರ 40 ಪರ್ಸೆಂಟ್ ಕಮಿಷನ್ ಬರುತ್ತದೆ. ಇನ್ನು ಅಧಿಕಾರಿಗಳ ವರ್ಗಾವಣೆಯಿಂದ ಆದಾಯ ಬರುವುದು, ಭ್ರಷ್ಟಚಾರದಲ್ಲಿ ಮೊದಲ ಸ್ಥಾನ ಈ ಸರಕಾರಕ್ಕಿದೆ. ಜಾತಿ ಧರ್ಮದ ವಿರುದ್ದ ಎತ್ತಿ ಕಟ್ಟಿ ಅಧಿಕಾರಕ್ಕೆ ಬಂದ ಸರಕಾರ ಅಭಿವೃದ್ಧಿಯನ್ನೆ ಮರೆತು ಬಿಟ್ಟಿದೆ. ಕುಶಾಲನಗರಕ್ಕೆ ರೈಲು ಬರುವುದಾಗಿ ಹೇಳಿ ಜನಪ್ರತಿನಿಧಿಗಳು ರೈಲು ಬಿಡುತ್ತಿದ್ದಾರೆ. ವನ್ಯಜೀವಿಗಳು ಮನುಷ್ಯರನ್ನೆ ತಿನ್ನುತಿದ್ದರು ಅದರ ಬಗ್ಗೆ ಚಿಂತೆ ಮಾಡದವರು ಇನ್ನೆನು ಸಾಧನೆ ಮಾಡಲು ಸಾಧ್ಯ ಎಂದು ಆರೋಪಿಸಿದರು.
ವಿರಾಜಪೇಟೆ ಸಿಪಿಐಎಂ ಕಾರ್ಯದರ್ಶಿ ಶಾಜಿ ರಮೇಶ್ ಮಾತನಾಡಿ, ಕೇಂದ್ರ ಸರಕಾರದ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ರಾಜ್ಯ ಸರಕಾರ ಕಾರ್ಮಿಕರನ್ನು ಕಡೆಗಣಿಸುತ್ತಿದೆ. ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದ ಸಂದರ್ಭ ಆಸ್ತಿ ಮನೆ ಕಳೆದುಕೊಂಡವರಿಗೆ ಇನ್ನು ವಸತಿ ದೊರಕಿಲ್ಲ. ವಿರಾಜಪೇಟೆ ಪುರಸಭೆ ಅವರದ್ದೇ ಸರಕಾರ ಇದ್ದರು ಅಭಿವೃದ್ಧಿ ಕಂಡಿಲ್ಲಾ, ರಸ್ತೆಗಳೆಲ್ಲ ವಾಹನ ಸಂಚಾರಕ್ಕೆ ಯೋಗ್ಯವಿಲ್ಲ. ಬೆಟ್ಟ ಪ್ರದೇಶದ ಜನರಿಗೆ ವಸತಿ ನೀಡುವ ಯೋಜನೆಗೆ ಮೂರು ವರ್ಷ ಕಳೆದರು ನಿವೇಶನ ಕೊಡಲು ಸಾಧ್ಯವಾಗಿಲ್ಲ ಇವರು ಜನಪ್ರತಿನಿಧಿಗಳೆ ಎಂಬ ಪ್ರಶ್ನೆ ಉಂಟಾಗಿದೆ ಎಂದರು.
ಜನಾಂದೋಲನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಚಾರ ಸಮಿತಿಯ ಹೆಚ್.ಪಿ.ರಮೇಶ್, ಸಿ.ಐ.ಟಿ.ಯು ಜಿಲ್ಲಾ ಅಧ್ಯಕ್ಷ ಭರತ್, ಸಿ.ಪಿ.ಐ.[ಎಂ]ಜಿಲ್ಲಾ ಸಮಿತಿಯ ಮಹದೇವ, ಎನ್.ಡಿ. ಕುಟ್ಟಪ್ಪ, ಕೆ.ಎಸ್. ರತೀಶ್, ಖಾಲಿದ್, ಬಾಬುಟಿ, ಪದ್ಮಿನಿ ಮತ್ತಿರರು ಪಾಲ್ಗೊಂಡಿದ್ದರು.