ಸುಂಟಿಕೊಪ್ಪ ಮಾ.1 : ಫ್ರೆಂಡ್ಸ್ ಯೂತ್‍ಕ್ಲಬ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾ ಪ್ರತಿಭೆಗಳಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಉತ್ತಮ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ ಎಂದು ಪ್ರಮುಖರಾದ ವಿ.ಪಿ.ಶಶಿಧರ್ ಹೇಳಿದರು.
ನಾಕೂರು-ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‍ನ 23ನೇ ವಾರ್ಷಿಕೋತ್ಸವದ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲೆ ಹಾಗೂ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಕೆಲಸ ಆಗುತ್ತಿದ್ದು, ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಇದು ಉತ್ತಮ ವೇದಿಕೆಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಡ್ಯಾನ್ಸ್‍ಮೇಳ ಕಾರ್ಯಕ್ರಮದ ದಾನಿಗಳಾದ ಕಾಫಿ ಬೆಳೆಗಾರರಾದ ಅಡಿಕೇರಿ ಧರ್ಮಪ್ಪ ವಹಿಸಿದ್ದರು.
ಸಮಾರಂಭದ ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷ ಮಂದೋಡಿ.ಸಿ.ಜಗನ್ನಾಥ್, ಮಾಜಿ ಅಧ್ಯಕ್ಷ ಬಿ.ಜಿ.ರಮೇಶ್, ಹಾರಂಗಿ ಕಾವೇರಿ ಮೀನುಗಾರರ ಸಂಘ ಅಧ್ಯಕ್ಷ ಮಹಮದ್, ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷ ಅಂಬೆಕಲ್ ಚಂದ್ರಶೇಖರ್, ಗೌರವಧ್ಯಕ್ಷ ಕುಂಞಕೃಷ್ಣ, ಕಾರ್ಯದರ್ಶಿ ಶಂಕರ ನಾರಾಯಣ, ಸದಸ್ಯರುಗಳಾದ ಕಿಟ್ಟಣ್ಣ ರೈ ಮತ್ತಿತರರು ಇದ್ದರು.
ಇದೇ ಸಂದರ್ಭ ಗ್ರಾಮೀಣ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಕಬ್ಬಡ್ಡಿ ವಿಭಾಗದಲ್ಲಿ ಪ್ರಥಮ ಭಜರಂಗಿ ಪ್ರೆಂಡ್ಸ್, ದ್ವಿತೀಯ ಸೆವೆನ್ ಸ್ಟಾರ್ ತಂಡಗಳು ಬಹುಮಾನವನ್ನು ಪಡೆದುಕೊಂಡಿತು.
ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಟೀಂ ಆಫಿಶಿಯಲ್, ದ್ವಿತೀಯ ನವೀನ್ ಬಹುಮಾನ ಪಡೆದುಕೊಂಡರು.
ಎಫ್.ಸಿ. ಮುಕ್ತ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಬಿವೈಸಿ ಮಳ್ಳೂರು, ದ್ವಿತೀಯ ಸ್ಥಾನ ವಿರಾಜಪೇಟೆ ಪ್ರೆಂಡ್ಸ್, ತೃತೀಯ ಸ್ಥಾನ ಪಂಚಲಿಂಗೇಶ್ವರ ಟೀಂ ಪಡೆದುಕೊಂಡಿತು.
ಸ್ಥಳೀಯ ಮಹಿಳೆಯರಿಗೆ ಆಯೋಜಸಲಾಗಿದ್ದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಲೀಲಾವತಿ ಫ್ರೆಂಡ್ಸ್ ಪ್ರಥಮ, ದ್ವಿತೀಯ ಸ್ಥಾನ ಯುವಬಳಗ ಮಂಜಿಕೆರೆ, ಹಗ್ಗ ಜಗ್ಗಾಟ ಪುರುಷರ ವಿಭಾಗದಲ್ಲಿ ಟೀಂಬರ್ ಬಾಯ್ಸ್ ಮಳ್ಳೂರು, ದ್ವಿತೀಯ ಸ್ಥಾನ ಪ್ರೆಂಡ್ಸ್ ಯೂತ್ ಕಾನ್‍ಬೈಲ್, ಮಹಿಳೆಯರ ವಿಭಾಗದಲ್ಲಿ ಲೀಲಾವತಿ ಪ್ರೆಂಡ್ಸ್ ಪ್ರಥಮ, ದ್ವಿತೀಯ ನಾಕೂರು ಕಾಲೋನಿ ತಂಡಗಳು ಪಡೆದುಕೊಂಡಿತು. ವೇದಿಕೆಯಲ್ಲಿದ್ದ ವಿಜೇತ ಕ್ರೀಡಾ ತಂಡಗಳಿಗೆ ಅತಿಥಿಗಳು ಬಹುಮಾನ ನೀಡಿದರು.









