ಮಡಿಕೇರಿ ಮಾ.8 : ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಜೊತೆಗೆ ಎಲ್ಲರಿಗೂ ಸಮಾನ ಅವಕಾಶಗಳು ಲಭಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಮಹಿಳಾ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ, ಸಂಜೀವಿನಿ (ಡೇ-ನರ್ಮ್), ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ಡೇ-ನಲ್ಮ್) ಇವರ ಸಹಯೋಗದಲ್ಲಿ ನಗರದ ಬಾಲಭವನದಲ್ಲಿ ನಡೆದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಕೊಡಗು ಜಿಲ್ಲೆಯಲ್ಲಿ ಮಹಿಳೆಯರ ಸರಾಸರಿ ಪ್ರಮಾಣವು ಒಂದು ಸಾವಿರ ಪುರುಷರಿಗೆ, 1026 ಮಹಿಳೆಯರು ಇದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಅವರು, ಮಹಿಳೆಯರಿಗೆ ಉದ್ಯೋಗದಲ್ಲಿ ಶೇ.33 ರಷ್ಟು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ರಷ್ಟು ಮೀಸಲಾತಿ ಇದ್ದು, ಇದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.’
ಮಹಿಳೆಯರು ಸೇನೆ, ವಿಮಾನಯಾನ, ಕ್ರೀಡೆ, ಸಿನಿಮಾ, ಆಡಳಿತ ಹೀಗೆ ಪ್ರತೀ ರಂಗದಲ್ಲಿಯೂ ಮುಂಚೂಣಿಯಲ್ಲಿದ್ದು, ತಮ್ಮ ಶಕ್ತಿ ಮತ್ತು ಸಾಮಥ್ರ್ಯವನ್ನು ತೋರಿಸಿದ್ದಾರೆ. ಆ ನಿಟ್ಟಿನಲ್ಲಿ ಮಹಿಳೆಯರಿಗೆ ಸಹಾನುಭೂತಿ ಬೇಕಿಲ್ಲ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಸದ್ಯದಲ್ಲೇ ವಿಧಾನಸಭಾ ಚುನಾವಣೆ ಬರಲಿದ್ದು, ಅರ್ಹರೆಲ್ಲರೂ ಮತದಾನ ಮಾಡುವಂತಾಗಬೇಕು. 18 ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಯಲ್ಲಿ ಇದುವರೆಗೆ ಹೆಸರು ಸೇರ್ಪಡೆ ಮಾಡದಿದ್ದಲ್ಲಿ ಹೆಸರು ಸೇರಿಸಲು ಮುಂದಾಗಬೇಕು. ಜೊತೆಗೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.
ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ದಿನಪತ್ರಿಕೆಗಳಲ್ಲಿ ಮಹಿಳೆಯರ ಸಾಧನೆ ಸಂಬಂಧಿಸಿದಂತೆ ಪ್ರಕಟವಾಗಿರುವ ಮಾಹಿತಿ ಓದುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಜೀವ ವೈವಿದ್ಯ ಮಂಡಳಿ ರಾಜ್ಯಾಧ್ಯಕ್ಷರಾದ ನಾಪಂಡ ರವಿಕಾಳಪ್ಪ ಅವರು ಮಾತನಾಡಿ ರಾಷ್ಟ್ರದಲ್ಲಿ ಮಹಿಳೆಯರಿಗೆ ಮಾತೃ ಸ್ಥಾನ ನೀಡಲಾಗಿದೆ. ಪುರುಷರ ಜೊತೆ ಮಹಿಳೆಯರಿಗೂ ಸಮಾನ ಅವಕಾಶಗಳು ದೊರೆಯುತ್ತಿವೆ ಎಂದರು.
ಭಾರತ ಸ್ವಾತಂತ್ರ್ಯಕ್ಕಾಗಿ ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವರು ಹೋರಾಡಿದ್ದಾರೆ. ಅಂತವರನ್ನು ಸದಾ ಸ್ಮರಿಸಬೇಕು ಎಂದರು.
ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿ ಸ್ವ ಪ್ರತಿಭೆ ಮತ್ತು ಹೋರಾಟದಿಂದ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಇದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಹಿಂದೆ ಮಹಿಳೆ ಅಬಲೆ ಎಂಬ ಮನಃಸ್ಥಿತಿ ಇತ್ತು. ಆದರೆ ಎಲ್ಲಾ ಕ್ಷೇತ್ರದಲ್ಲಿಯೂ ಮುಂದೆ ಇದ್ದಾರೆ. ಹೆಣ್ಣು ಎಷ್ಟೇ ಸಮಾನವಾಗಿ ಬದುಕಲು ಪ್ರಯತ್ನಿಸಿದರೂ ಸಹ ಶೋಷಣೆಗೆ ಒಳಗಾಗುವುದು ಅಲ್ಲಲ್ಲಿ ಕೇಳಿ ಬರುತ್ತದೆ. ಇದು ಕೊನೆಯಾಗಬೇಕು ಎಂದರು.’
ಸ್ತ್ರೀಶಕ್ತಿ ಒಕ್ಕೂಟದ ರಾಜ್ಯ ಮತ್ತು ಜಿಲ್ಲಾಧ್ಯಕ್ಷರಾದ ರೆಹನಾ ಸುಲ್ತಾನ ಅವರು ಸ್ತ್ರೀಶಕ್ತಿ ಸಂಘಗಳು ಮಹಿಳಾ ಅಭಿವೃದ್ಧಿಗೆ ಪೂರಕವಾಗಿದ್ದು, ಎಲ್ಲಾ ಮಹಿಳೆಯರು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಸ್ವಾವಲಂಬಿಯಾಗಿ ಬದುಕು ನಡೆಸುವಂತಾಗಬೇಕು ಎಂದರು.
ಅಂಗನವಾಡಿ ಕಾರ್ಯಕರ್ತರಾದ ಭಾಗ್ಯವತಿ, ದಮಯಂತಿ, ಜಯಲಲಿತಾ ಇವರಿಗೆ ಫಲ ತಾಂಬೂಲ, ಶಾಲೂ ನೀಡಿ ಗೌರವಿಸಲಾಯಿತು.
ಜಿ.ಪಂ.ಯೋಜನಾ ನಿರ್ದೇಶಕರಾದ ಎಸ್.ಜಗದೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎನ್.ಮಂಜುನಾಥ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ.ಎಂ.ಉಮಾ, ಜಿ.ಪಂ.ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ವಿಮಲ, ಸಿಡಿಪಿಒ ಸೀತಾಲಕ್ಷ್ಮಿ, ಅಣ್ಣಯ್ಯ, ಕೌಶಲ್ಯಾಭಿವೃದ್ಧಿ ಇಲಾಖೆಯ ರೇಖಾ ಗಣಪತಿ, ಜಯಂತಿ, ಸತ್ಯಭಾಮಾ, ಜಿ.ಪಂ. ಎನ್‍ಆರ್‍ಎಲ್‍ಎಂ ಸಂಜೀವಿನಿ ಕಾರ್ಯಕ್ರಮದ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಪಿ.ಕುಮಾರ, ಇತರರು ಇದ್ದರು.
ಸಿಡಿಪಿಒ ಸೀತಾಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯತ್ರಿದೇವಿ ಪ್ರಾರ್ಥಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ನಿರೂಪಿಸಿ, ವಂದಿಸಿದರು.
ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಉದ್ಘಾಟಿಸಿದರು.