ಮಡಿಕೇರಿ ಮಾ.8 : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರೀನ್ ಸಿಟಿ ಫೋರಂ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ “ಆರೋಗ್ಯವಂತ ಮಹಿಳೆಯಿಂದ ಆರೋಗ್ಯಕರ ಭಾರತ” ಎನ್ನುವ ಘೋಷ ವಾಕ್ಯದೊಂದಿಗೆ ಮತದಾನದ ಮಹತ್ವ ಮತ್ತು ವಾಯುಮಾಲಿನ್ಯ ತಡೆಯುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಸೈಕ್ಲೊಥಾನ್ ಜಾಥಾವು ನಡೆಯಿತು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಾಥಾಗೆ ಚಾಲನೆ ನೀಡಿದರು. ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಹೊರಟು ಜನರಲ್ ತಿಮ್ಮಯ್ಯ ವೃತ್ತ-ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ-ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣ-ಕೈಗಾರಿಕಾ ಬಡಾವಣೆ-ರೇಸ್‍ಕೋರ್ಸ್ ರಸ್ತೆ ಮೂಲಕ ಗ್ರೇಟರ್ ರಾಜಸೀಟುವರೆಗೆ ಜಾಥ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಂಜುಂಡಯ್ಯ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್, ಇತರರು ಸೈಕ್ಲೊಥಾನ್ ಜಾಥದಲ್ಲಿ ಪಾಲ್ಗೊಂಡಿದ್ದರು.