ಮಡಿಕೇರಿ ಮಾ.8 : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಪ್ರಯತ್ನದ ಭಾಗವಾಗಿ ಕೊಡಗು ಜಿಲ್ಲೆಯಲ್ಲಿ ಪಕ್ಷದ ಸರಣಿ ಕಾರ್ಯಕ್ರಮಗಳು ಆಯೋಜಿತವಾಗಿದೆ. ಮಾ.10 ಮತ್ತು 11 ರಂದು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ವಿಜಯ ಸಂಕಲ್ಪಯಾತ್ರೆ ನಡೆಯಲಿದೆ. ಇದರೊಂದಿಗೆ ಮಾ.20 ರ ವರೆಗೆ ವಿವಿಧ ಮೋರ್ಚಾಗಳ ಸಮಾವೇಶಗಳನ್ನು ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವಿವಿಧ ಕಾರ್ಯಕ್ರಮಗಳ ಜೊತೆಯಲ್ಲೆ ಮಾ.18 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ‘ಫಲಾನುಭವಿಗಳ ಸಮಾವೇಶ’ ನಡೆಯಲಿದೆ. ಇದರಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ ಎಂದರು.
::: ಸಂಕಲ್ಪ ಯಾತ್ರೆ :::
ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳನ್ನು ಸಂಪರ್ಕಿಸುವ ನಾಲ್ಕು ವಿಜಯ ಸಂಕಲ್ಪ ಯಾತ್ರ್ರೆಗಳು ಈಗಾಗಲೆ ಆರಂಭವಾಗಿದೆ. ಚಾಮರಾಜನಗರದ ಮಲೆಮಹದೇಶ್ವರದಿಂದ ಆರಂಭವಾಗಿರುವ ವಿಜಯ ಸಂಕಲ್ಪಯಾತ್ರೆ ಮಾ.10 ರಂದು ವಿರಾಜಪೇಟೆ ಕ್ಷೇತ್ರದ ಗೋಣಿಕೊಪ್ಪಲು ಮೂಲಕ ಕೊಡಗನ್ನು ಪ್ರವೇಶಿಸಲಿದ್ದು, ರಥಕ್ಕೆ ಭವ್ಯ ಸ್ವಾಗತವನ್ನು ಪಕ್ಷದ ವತಿಯಿಂದ ನೀಡಲಾಗುತ್ತದೆ ಎಂದರು.
ಅಂದು ಸಂಜೆ 5.30 ಗಂಟೆಗೆ ಗೋಣಿಕೊಪ್ಪಲಿನಲ್ಲಿ ಪಕ್ಷದ ಮುಖಂಡರು ಹಾಗೂ ಮಾಜಿ ಮುಖ್ಯ ಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶ ನಡೆಯಲಿದೆ. ಅಂದು ಸಂಜೆ ಮಡಿಕೇರಿಯಲ್ಲಿ ವಾಸ್ತವ್ಯ ಹೂಡಲಿರುವ ಪಕ್ಷದ ನಾಯಕರು ವಿವಿಧ ಸಮುದಾಯದವರನ್ನು ಭೇಟಿಯಾಗುವ ಕಾರ್ಯಕ್ರಮವಿದೆ. ಮಾ.11 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದವರೆಗೆ ‘ರೋಡ್ ಶೋ’ ಮತ್ತು ವಿಜಯ ಸಂಕಲ್ಪ ರಥದಲ್ಲಿ ಪಕ್ಷದ ನಾಯಕರು ಮಾತನಾಡಲಿದ್ದಾರೆ. ಬಳಿಕ ರಥ ದಕ್ಷಿಣ ಕನ್ನಡದತ್ತ ತೆರಳಲಿದೆ ಎಂದು ಮಾಹಿತಿ ನೀಡಿದರು.
ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಮಾ.25 ಅಥವಾ 26 ರಂದು ದಾವಣಗೆರೆಯಲ್ಲಿ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರಮೋದಿ ಪಾಲ್ಗೊಳ್ಳಲಿದ್ದಾರೆ.
ಮಾ.13 ರಂದು ಸೋಮವಾರಪೇಟೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ಯುವ ಮೋರ್ಚಾ ಸಮಾವೇಶ ನಡೆಯಲಿದ್ದು, ಇಂಧನ ಸಚಿವ ವಿ.ಸುನಿಲ್ ಕುಮಾರ್ ಭಾಗವಹಿಸಲಿದ್ದಾರೆ. ಮಾ.14 ರಂದು ಮೂರ್ನಾಡು ಕೊಡವ ಸಮಾಜದಲ್ಲಿ ರೈತ ಮೋರ್ಚ ಸಮಾವೇಶ ನಡೆಯಲಿದ್ದು, ಗೃಹ ಸಚಿವ ಅರಗ ಜ್ಞಾನೇಂದ್ರ ಪಾಲ್ಗೊಳ್ಳಲಿದ್ದಾರೆ. ಮಾ.15 ರಂದು ವಿರಾಜಪೇಟೆಯಲ್ಲಿ ಮಹಿಳಾ ಮೋರ್ಚಾ ಸಮಾವೇಶ ಜರುಗಲಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ.
ಮಾ.16 ರಂದು ಕುಶಾಲನಗರದಲ್ಲಿ ಎಸ್.ಸಿ. ಮೋರ್ಚಾದ ಕಾರ್ಯಕ್ರಮ ಆಯೋಜಿತವಾಗಿದ್ದು, ಇದರಲ್ಲಿ ಸಚಿವ ಗೋವಿಂದ ಕಾರಜೋಳ ಪಾಲ್ಗೊಳ್ಳಲಿದ್ದಾರೆ. ಮಾ.20 ರಂದು ಪೊನ್ನಂಪೇಟೆಯಲ್ಲಿ ಎಸ್.ಟಿ. ಮೋರ್ಚಾದ ಸಮಾವೇಶ ನಡೆಯಲಿರುವುದಾಗಿ ರಾಬಿನ್ ದೇವಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ಮಾದಪ್ಪ, ಉಪಾಧ್ಯಕ್ಷೆ ರೂಪ ಸತೀಶ್ ಹಾಗೂ ನಗರಾಧ್ಯಕ್ಷ ಮನು ಮಂಜುನಾಥ್ ಉಪಸ್ಥಿತರಿದ್ದರು.