ಮಡಿಕೇರಿ ಮಾ.8 : ಕರ್ನಾಟಕ ಜೀವ ವೈವಿಧ್ಯ ಮಂಡಳಿ ವತಿಯಿಂದ ರಾಜ್ಯ ಪಾರಂಪರಿಕ ವೈದ್ಯ ಪರಿಷತ್ ಸಹಯೋಗದಲ್ಲಿ ವಲಯ ಮಟ್ಟದ ನಾಟಿ ವೈದ್ಯರ ಸಮಾವೇಶ ಸಂಬಂಧ ಪೂರ್ವಭಾವಿ ಸಭೆಯು ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಂಡಳಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮೊದಲ ಕಾರ್ಯಕ್ರಮವನ್ನು ಮೇ ಅಂತ್ಯದಲ್ಲಿ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ರವಿ ಕಾಳಪ್ಪ, ರಾಜ್ಯ ಮಟ್ಟದ ಸಮ್ಮೇಳನ ನಡೆಸುವ ಉದ್ದೇಶ ಮಂಡಳಿಯದ್ದಾಗಿತ್ತು. ಆದರೆ ಅನಿವಾರ್ಯ ಕಾರಣದಿಂದ ಅದಾಗಲಿಲ್ಲ. ವಲಯ ಮಟ್ಟದ ಸಮ್ಮೇಳನವನ್ನು ವ್ಯವಸ್ಥಿತವಾಗಿ ಆಯೋಜಿಸಬೇಕೆಂದು ಸಲಹೆ ನೀಡಿದರು.
ವಿಧಾನಸಭಾ ಚುನಾವಣೆ ಕಳೆದ ಬಳಿಕ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆಯಾಗಬೇಕು. ಹೆಸರಿಗೆ ಮಾತ್ರ ಕಾರ್ಯಕ್ರಮವಾಗದೆ, ನಾಟಿ ವೈದ್ಯರಿಂದ ಮಾಹಿತಿ ವಿನಿಮಯವಾಗುವಂತಿರಬೇಕು. ನುರಿತ ನಾಟಿ ವೈದ್ಯರಿಂದ ಕಾರ್ಯಾಗಾರ ಹಮ್ಮಿಕೊಳ್ಳಬೇಕು. ನಾಟಿ ವೈದ್ಯರಿಂದ ಸಂವಾದ ಕಾರ್ಯಕ್ರಮವನ್ನೂ ಏರ್ಪಡಿಸಬೇಕೆಂದು ತಿಳಿಸಿದರು.
ನಾಟಿ ವೈದ್ಯ ಪದ್ಧತಿಗೆ ಅದರದ್ದೇ ಆದ ಮಹತ್ವ ಇಂದಿಗೂ ಇದೆ. ತಮಗೆ ತಿಳಿದಿರುವ ಮಾಹಿತಿಯನ್ನು ಇತರರಿಗೆ ವಿನಿಮಯ ಮಾಡಬಾರದೆಂಬ ಕಲ್ಪನೆಯನ್ನು ನಾಟಿ ವೈದ್ಯರಿಂದ ದೂರ ಮಾಡಿಸಿ, ಮುಂದಿನ ಪೀಳಿಗೆಗೂ ಅದು ತಿಳಿಯುವಂತೆ ಮಾಡುವ ಹೊಣೆಗಾರಿಕೆ ಇದೆ. ಸಮಾವೇಶದ ಮೂಲಕ ಮಾಹಿತಿಗಳ ದಾಖಲೀಕರಣವೂ ಆಗಬೇಕೆಂದರು.
ಸಮಾವೇಶದಲ್ಲಿ ತುಮಕೂರು, ರಾಮನಗರ,ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ನಾಟಿ ವೈದ್ಯರನ್ನು ಆಹ್ವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾರ್ಯಕ್ರಮ ಆಯೋಜನೆ ಸಂಬಂಧ ರಾಜ್ಯ ಪಾರಂಪರಿಕ ವೈದ್ಯ ಪರಿಷತ್ ಪ್ರಮುಖರಾದ ಮಾದೇವಯ್ಯ, ಕೃಷ್ಣಮೂರ್ತಿ, ಡಿಸಿಎಫ್ ಗೋವರ್ಧನ್ ಸಿಂಗ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಕೆ.ಎ. ಪವಿತ್ರ, ಎಸಿಎಫ್ ಕುಮಾರ್, ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಎಂ.ಜೆ. ಪ್ರಭು ಹಲವು ಸಲಹೆ ನೀಡಿದರು.