ಮಡಿಕೇರಿ ಮಾ.8 : ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ “ಅಂತರರಾಷ್ಟ್ರೀಯ ಮಹಿಳಾ ದಿನ”ವಾದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿತು.
ಕೊಡವ ಬುಡಕಟ್ಟು ಜನಾಂಗದ ಮಹಿಳೆಯರು ಹಾಗೂ ಬಾಲಕಿಯರಿಗೆ ಸಾಂವಿಧಾನಿಕ ಹಕ್ಕು ಮತ್ತು ಸಬಲತೆ ನೀಡಬೇಕೆಂದು ಧರಣಿಯ ನೇತೃತ್ವದ ವಹಿಸಿದ್ದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದರು.
ಸಂಸತ್, ವಿಧಾನಸಭೆ, ವಿಧಾನ ಪರಿಷತ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗಾಗಿ ಘೋಷಿಸಿರುವ ಶೇ.33 ಸೀಟುಗಳಲ್ಲಿ ಕೊಡವ ಮಹಿಳೆಯರಿಗೆ ಪ್ರತ್ಯೇಕ ಆಂತರಿಕ ಕೋಟಾವನ್ನು ನೀಡಬೇಕು. ಕೊಡವ ಬುಡಕಟ್ಟು ಜನಾಂಗದ ಮಹಿಳೆಯರು ಉತ್ತಮ ಕೃಷಿಕರು. ಆದರೆ ಶೇ.99 ರಷ್ಟು ಕೊಡವ ಮಹಿಳೆಯರು ತಮ್ಮದೇ ಆದ ಕೃಷಿಭೂಮಿಯನ್ನು ಹೊಂದಿಲ್ಲ. ಆದ್ದರಿಂದ ತಮ್ಮ ಸಾಂಸ್ಕೃತಿಕ ಮೂಲವನ್ನು ಹೊಂದಿರುವ ಮಡಿಕೇರಿಯಲ್ಲಿ ಪ್ರತಿ ಕೊಡವತಿಗೆ 5 ಎಕರೆ ಭೂಮಿಯನ್ನು ಕಡ್ಡಾಯವಾಗಿ ಮಂಜೂರು ಮಾಡಬೇಕು. ಇದರಿಂದ ಕೊಡವ ಮಹಿಳೆಯರು ಆರ್ಥಿಕ ಸಬಲತೆಯನ್ನು ಹೊಂದಬಹುದು ಮತ್ತು ವಿವಿಧ ಅಧಿಕಾರವನ್ನು ಅನುಭವಿಸಬಹುದು.
ಕೊಡವ ಮಹಿಳೆಯರು ಯೋಧ ಮತ್ತು ಬೇಟೆಯ ಕುಲದ ವಂಶಸ್ಥರು, ಕಾಡುಗಳಲ್ಲಿ ವಾಸಿಸುತ್ತಿದ್ದರು, ಕ್ರಮೇಣ ಕೃಷಿಕರಾಗಿ ರೂಪಾಂತರಗೊಂಡರು. ಆದರೆ ಅವರು ಭೂರಹಿತರಾಗಿದ್ದು, ನಿಜವಾದ ಅರ್ಥದಲ್ಲಿ ತÀಮ್ಮ ಸಂಗಾತಿಯ ಕುಟುಂಬದಲ್ಲಿ ಸಂಬಳ ಪಡೆಯದ ಕಾರ್ಮಿಕರು ಎಂದು ನಾಚಪ್ಪ ಅಭಿಪ್ರಾಯಪಟ್ಟರು.
ಸ್ಪೇನ್, ಕೇರಳ ಮತ್ತು ಬಿಹಾರದ ಮಾದರಿಯಲ್ಲಿ ಕೆಲಸದ ಸ್ಥಳ ಮತ್ತು ಶಾಲೆಯಲ್ಲಿ ಕೊಡವ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಬೇಕು. ಕೇಂದ್ರ ಪ್ರಸ್ತಾವಿತ ಹೊಸ ಸಂಸತ್ತಿನಲ್ಲಿ ಕೊಡವ ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯ ನೀಡಬೇಕು.
ಕೊಡವ ಬುಡಕಟ್ಟು ಜನಾಂಗದವರು “ಸಪ್ತಪದಿ”ಯ ತತ್ವಗಳನ್ನು ಪಾಲಿಸದ ಕಾರಣ ಕಲ್ಯಾಣ ರಾಜ್ಯ ಯೋಜನೆಯ “ಸಪ್ತಪದಿ ಭಾಗ್ಯ” ಕ್ಕೆ ಸಮಾನವಾಗಿ ಕೊಡವತಿ ವಧುವಿಗೆ “ಪತ್ತಾಕ್ ಭಾಗ್ಯ” ಯೋಜನೆ ಜಾರಿಗೆ ತರಬೇಕು. ಇದರಿಂದ ಬಡತನದಲ್ಲಿರುವ ಕೊಡವತಿಯರಿಗೆ ಅನುಕೂಲವಾಗಲಿದೆ. ಕೊಡವ ಬುಡಕಟ್ಟು ಜನಾಂಗದವರು ಪೌಷ್ಟಿಕ ಆಹಾರ ನೀಡುವ ವಿಶಿಷ್ಟ ವ್ಯವಸ್ಥೆಯನ್ನು ಅನುಸರಿಸುತ್ತಿದ್ದಾರೆ. ಆದ್ದರಿಂದ “ಸೀಮಂತ ಭಾಗ್ಯ” ಕ್ಕೆ ಬದಲಾಗಿ ಬಡ ಕೊಡವತಿ ಗರ್ಭಿಣಿಯರಿಗೆ “ಕೂಪದಿ ಕೂಳ್ ಭಾಗ್ಯ” ನೀಡಬೇಕು ಎಂದು ಒತ್ತಾಯಿಸಿರುವ ಮನವಿ ಪತ್ರವನ್ನು ನಾಚಪ್ಪ ಅವರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಪಟ್ಟಮಾಡ ಲಲಿತ, ಕಲಿಯಂಡ ಮೀನಾ ಪ್ರಕಾಶ್, ಪುಲ್ಲೇರ ಸ್ವಾತಿ ಕಾಳಪ್ಪ, ಲೆ.ಕರ್ನಲ್ ಬಿ.ಎಂ ಪಾರ್ವತಿ, ಅರೆಯಡ ಸವಿತ, ಅಪ್ಪಚ್ಚಿರ ರೀನಾ ರಮ್ಮಿ, ಕೂಪದಿರ ಪುಷ್ಪ ಮುತ್ತಪ್ಪ, ಪುಟ್ಟಿಚಂಡ ನಿಮಿತ ದೇವಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಇಟ್ಟಿರ ಸಬಿತ, ನಂದಿನೆರವಂಡ ನಿಶ ಅಚ್ಚಯ್ಯ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್, ಚಂಬಂಡ ಜನತ್, ಕಿರಿಯಮಾಡ ಶರೀನ್, ಬೇಪಡಿಯಂಡ ದಿನು, ಪುಲ್ಲೇರ ಕಾಳಪ್ಪ, ಅಪ್ಪಚ್ಚಿರ ರಮ್ಮಿ ನಾಣಯ್ಯ, ನಂದಿನೆರವಂಡ ವಿಜು, ಕೂಪದಿರ ಸಾಬು, ಪುಟ್ಟಿಚಂಡ ದೇವಯ್ಯ, ಮಣುವಟ್ಟಿರ ಚಿಣ್ಣಪ್ಪ, ಮಂಡಪಂಡ ಮನೋಜ್, ಚಂಗಂಡ ಚಾಮಿ, ಮೇದುರ ಕಂಠಿ, ಬಡುವಂಡ ವಿಜಯ, ಅಜ್ಜಿನಿಕಂಡ ಸನ್ನಿ, ನಂದಿನೆರವಂಡ ಅಯ್ಯಣ್ಣ, ನಂದಿನೆರವಂಡ ಅಪ್ಪಯ್ಯ ಪಾಲ್ಗೊಂಡಿದ್ದರು.