ಕುಶಾಲನಗರ, ಮಾ.8 : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಅಂಗವಾಗಿ
ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಬೆಳ್ಳಿ ಮಹೋತ್ಸವ ಸಾಂಸ್ಕೃತಿಕ ಸಮಿತಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕುಶಾಲನಗರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಮಡಿಕೇರಿಯ ರೂಪಾ ಸತೀಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮಾಜಕ್ಕೆ, ತುಂಬಿದ ಕುಟುಂಬಕ್ಕೆ ತಾಯಂದಿರ ಕೊಡುಗೆ ಅಪಾರ. ಎಲ್ಲಾ ಕ್ಷೇತ್ರದಲ್ಲಿ ಮಹಿಳೆ ತನ್ನ ಛಾಪು ಮೂಡಿಸುತ್ತಿದ್ದಾಳೆ. ಕುಟುಂಬದ ಆರೈಕೆ ನಡುವೆ ದೊರೆಯುವ ಬಿಡುವನ್ನು ಉತ್ತಮ ಹವ್ಯಾಸಗಳಿಗೆ ಮೀಸಲಿಡುವ ಮೂಲಕ ಆರೋಗ್ಯಯುತ ಬದುಕಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು. ಸಾಧನೆಗೆ ಅಡ್ಡಿ ಎಂಬುದು ಯಾವುದು ಇಲ್ಲ. ದೃಢ ಮನಸ್ಸಿನ ಸಂಕಲ್ಪ, ನಿರಂತರ ಅಧ್ಯಯನ, ಪ್ರಯತ್ನಗಳು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ ಎಂದು ಸಲಹೆ ನೀಡಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಕೂಡಿಗೆ ಕ್ರೀಡಾಶಾಲೆ ನಿವೃತ್ತ ಮುಖ್ಯ ಶಿಕ್ಷಕಿ ಕುಂತಿ ಬೋಪಯ್ಯ ಮಾತನಾಡಿ, ಹೆಣ್ಣೆಂದರೆ ಒಂದು ಶಕ್ತಿಯ ರೂಪ. ಬಹುಮುಖ ಪಾತ್ರಗಳನ್ನು ವಹಿಸುವ ಮೂಲಕ ಕುಟುಂಬ, ಕಛೇರಿಗಳಲ್ಲಿ ತಮ್ಮ ಜವಾಬ್ದಾರಿ ಸಮರ್ಪಕವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಮಹಿಳೆಯರಿಂದ ಹಲವು ಚರಿತ್ರೆ ಸೃಷ್ಠಿಯಾದ ಉದಾಹರಣೆಗಳಿವೆ ಎಂದರು.
ಮಹಿಳಾ ಸಬಲೀಕರಣಕ್ಕೆ ಸರಕಾರ ನೀಡಿರುವ ಸೌಲಭ್ಯ, ಯೋಜನೆಗಳನ್ನು ಅರಿತುಕೊಂಡು ಸದುಪಯೋಗಪಡಿಸಿಕೊಂಡು ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಹೆಣ್ಣಿಗೆ ಹೆಣ್ಣು ಶತ್ರು ಎಂಬ ಗಾದೆಗೆ ವಿರುದ್ದವಾಗಿ ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ಸಂಘಟಿತರಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಸ್ತ್ರೀ ಪುರುಷ ಎಂಬ ಬೇದಭಾವ ಇಲ್ಲದ ಸಮಾಜ ಇಂದು ಕಂಡುಬರುತ್ತಿರುವುದು ಪ್ರಶಂಸನೀಯ ವಿಚಾರ ಎಂದರು.
ಶಿವಮೊಗ್ಗದ ಪಾರಂಪರಿಕ ನಾಟಿ ವೈದ್ಯೆ ಸುಮನ ಮಳಲಗದ್ದೆ ಮಹಿಳೆಯರ ಆರೋಗ್ಯ ಸಂಬಂಧಿಸಿದ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮ ಸಂಚಾಲಕರಾದ ಕುಶಾಲನಗರದ ವನಿತಾ ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಶಾಲನಗರದ ಪ್ರಿಯಾಂಕ ಗಂಗಾಧರಪ್ಪ, ರೇಖಾ ಗಣೇಶ್, ಪ್ರಜ್ಞಾ ರಾಜೇಂದ್ರ ಮತ್ತಿತರರು ಇದ್ದರು.
ವೇದಿಕೆ ಕಾರ್ಯಕ್ರಮದ ಬಳಿಕ ಪತ್ರಕರ್ತರ ಕುಟುಂಬ ಸೇರಿದಂತೆ ಕುಶಾಲನಗರದ ತಿರುಪತಿ ತಿರುಮಲ ಮಹಿಳಾ ಭಜನಾ ಮಂಡಳಿ, ಕೊಡವ ಗೌಡ ಮತ್ತಿತರ ಮಹಿಳಾ ಸಂಘಟನೆಗಳ ತಂಡದಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನೆರೆದಿದ್ದವರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಚಲನಚಿತ್ರ ನಟಿ ಸಿಂಚನ ಚಂದ್ರಮೋಹನ್ ನಡೆಸಿದರು.