ಕುಶಾಲನಗರ, ಮಾ.8 : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಅಂಗವಾಗಿ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಬೆಳ್ಳಿ ಮಹೋತ್ಸವ ಸಾಂಸ್ಕೃತಿಕ ಸಮಿತಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕುಶಾಲನಗರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.
ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಮಹಾ ಪೋಷಕ ಜಿ.ರಾಜೇಂದ್ರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮಹಿಳೆ ಸಶಕ್ತಳಾಗಿದ್ದಾಳೆ. ಭಾರತದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ದೊರೆಯುತ್ತಿದೆ ಎಂದ ಅವರು,
ಮಹಿಳೆಯರ ಸೌಂದರ್ಯ ಆರಾಧಿಸುವಂತಾಗಬೇಕು.ಆದರೆ ಸೌಂದರ್ಯ ಭಗ್ನಗೊಳಿಸುವ ಕಾರ್ಯ ವಿಷಾದನೀಯ ಬೆಳವಣಿಗೆ ಎಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಬೆಳ್ಳಿ ಮಹೋತ್ಸವದ ಅಂಗವಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನಮಾನಸಕ್ಕೆ ತಲುಪುವಂತಹ ವೈವಿಧ್ಯಮಯ ಕಾರ್ಯಕ್ರಮ ವಿವಿಧೆಡೆ ಜರುಗುತ್ತಿವೆ ಎಂದರು. ಸಮಾನತೆಯ ಉದ್ದೇಶಕ್ಕಾಗಿ ಆರಂಭವಾದ ಮಹಿಳಾ ದಿನಾಚರಣೆ ಪುರುಷ ದ್ವೇಶಿ ಕಾರ್ಯಕ್ರಮವಾಗಬಾರದು. ಮಕ್ಕಳನ್ನು ಸುಸಂಸ್ಕೃತರಾಗಿಸುವ ನಿಟ್ಟಿನಲ್ಲಿ ಪೋಷಕರು ಮುಖ್ಯ ಪಾತ್ರ ವಹಿಸಬೇಕು ಎಂದರು.
ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ.ಉಳ್ಳಿಯಡ ಎಂ.ಪೂವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳ್ಳಿ ಹಬ್ಬ ಆಚರಣೆ ಸಂಬಂಧ ಕೈಗೊಂಡಿರುವ ವಿವಿಧ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ, ದಿನದ ಶುಭಾಶಯ ಕೋರಿದರು.
ಸೋಮವಾರಪೇಟೆ ಅಬಕಾರಿ ಡಿವೈಎಸ್‌ಪಿ ಚೈತ್ರಾ, ಜಿಪಂ ಮಾಜಿ ಸದಸ್ಯೆ ಕೆ.ಪಿ.ಚಂದ್ರಕಲಾ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿದರು.
ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರು ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ, ಕಾರ್ಯಕ್ರಮ ಸಂಚಾಲಕಿ ವನಿತಾ ಚಂದ್ರಮೋಹನ್ ಸೇರಿದಂತೆ ಕೊಡಗು ಜಿಲ್ಲೆ ಹಾಗೂ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು, ಕೊಡಗು ಪ್ರೆಸ್ ಕ್ಲಬ್ ಆಡಳಿತ ಮಂಡಳಿ ಸದಸ್ಯರು ಸದಸ್ಯರು ಇದ್ದರು.