ನಾಪೋಕ್ಲು ಮಾ.9 : ಪೆರಾಜೆ ಗ್ರಾಮದ ಕುಂಬಳಚೇರಿಯ ಶ್ರೀ ವೈನಾಟ್ ಕುಲವನ್ ದೈವಸ್ಥಾನದ ವಯನಾಟ್ ಕುಲವನ್ ದೈವ ಕಟ್ಟು ಮಹೋತ್ಸವ ಮೂರು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಜರುಗಿತು.
300 ವರ್ಷಗಳ ನಂತರ 50 ಲಕ್ಷ ರೂ.ವೆಚ್ಚದಲ್ಲಿ ಮಹೋತ್ಸವ ನಡೆದಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನದಿಂದ ಹಸಿರುವಾಣಿ ಮೆರವಣಿಗೆ ಮೂಲಕ ಚಾಲನೆ ನೀಡಲಾಯಿತು. ಮುಂಜಾನೆಯಿಂದಲ್ಲೇ ಶ್ರೀ ಕಾರ್ನೋನ್ ದೈವ, ಶ್ರೀ ಕೋರಚ್ಚನ್ ದೈವ, ಶ್ರೀ ಕಂಡನಾರ್ ಕೇಳನ್ ದೈವ, 2ರಿಂದ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ ನಡೆಯಿತು. ಅಪರಾಹ್ನ ಶ್ರೀ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ ನಡೆಯಿತು.
ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ವೈಷ್ಣವಾಂಶ, ಶೈವಾಂಶ ಶಕ್ತಿಯ ವಿವಿಧ ಅವತಾರ ಶಕ್ತಿಯನ್ನು, ದೈವಗಳನ್ನು ಕೋಲ ರೂಪದಲ್ಲಿ ಆರಾಧಿಸಲಾಗುತ್ತಿದ್ದು, ಅವುಗಳಲ್ಲಿ ವಯನಾಟ್ ಕುಲವನ್ ಸಹ ಒಂದು. ಚೈತನ್ಯ ಮೂರ್ತಿ ಶ್ರೀ ಪರಮಶಿವನ ಅಂಶಾವತಾರದ ಆದಿ ದಿವ್ಯ ನಾಗಿ ಶ್ರೀ ವಯನಾಟ್ ಕುಲವನ್ ಭೂಮಿಯಲ್ಲಿ ಅವತರಿಸಿ, ವೈನಾಡಿನಲ್ಲಿ ನೆಲೆಸಿದರು. ವೈನಾಡಿನ ರಕ್ಷಕನಾಗಿ ಶೈವಾಂಶ ಸಂಭೂತನಾದ ಶ್ರೀ ವಯನಾಟ್ ಕುಲವನ್ ಬೇಟೆಗಾರ ದೈವವೆಂದು ಕರೆಯಲ್ಪಡುತ್ತಿದೆ. ಮಲೆನಾಡಿಗೆ ಪ್ರವೇಶಿಸಿ ಶ್ರೀ ತೊಂಡಚ್ಚನ್ ಎಂದು ಕರೆಯಲ್ಪಟ್ಟು ಅನೇಕ ಪ್ರದೇಶಗಳಲ್ಲಿ ಸಂಚರಿಸಿ ತುಳುನಾಡಿಗೆ ಆಗಮಿಸಿ ಅಲ್ಲಲ್ಲಿ ನೆಲೆ ಐತಿಹ್ಯವಿದೆ. ಆದಿಪರಂಬು ಕಣ್ಣನ ಆತಿಥ್ಯ ಮತ್ತು ಭಕ್ತಿಗೆ ಮೆಚ್ಚಿ ತನ್ನೊಡನೆ ಲೀನಗೊಳಿಸಿ ತೀಯರ ಕಾರ್ನವನನ್ನಾಗಿ ಸಂಭೋದಿಸಿ ಗೌರವಿಸಲಾಯಿತು.
ಈ ಸಂದರ್ಭ ದೈವಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ, ನೀಲೇಶ್ವರ ಕ್ಷೇತ್ರದ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾ.ಪಂ ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ, ಪೆರಾಜೆ ಶ್ರೀ ಶಾಸ್ತಾವು ದೇವಾಲಯದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ವಯನಾಟ್ ಕುಲವನ್ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ತಂಬುರಾಟಿ ಭಗವತಿ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಕುಂಞಕಣ್ಣ ಬೇಡಗಂತೊಡಿಕಾನದ ಶ್ರೀಮಲ್ಲಿ ಕಾರ್ಜುನ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿವಾಕರ ರೈ, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಊರಿನ ಪರ ಊರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.