ವಿರಾಜಪೇಟೆ ಮಾ.9 : ಪುರಸಭೆಯ ಆಡಳಿತ ಸದಸ್ಯರು ಅವೈಜ್ಞಾನಿಕವಾಗಿ ಪೇ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರಿಂದ ಜನಸಾಮಾನ್ಯರಿಗೆ ಆರ್ಥಿಕ ಹೊರೆ ಬೀಳುತ್ತಿದೆ. ಅಧ್ಯಕ್ಷರು ಆಡಳಿತ ಪಕ್ಷ ಸದಸ್ಯರು ತೊಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಪಟ್ಟಡ ರಂಜಿ ಪೂಣಚ್ಚ ಆರೋಪಿಸಿದರು.
ಪುರಸಭೆಯ ಬಜೆಟ್ ಪೂರ್ವಭಾವಿ ಸಭೆಯನ್ನು ಅಧ್ಯಕ್ಷರು ಮುಂದೂಡಿದ ಬಳಿಕ ಮಾತನಾಡಿ, ವಾಹನ ಶುಲ್ಕ ಎತ್ತಾವಳಿ ಟೆಂಡರ್ ಪ್ರಕ್ರಿಯೆಗೆ ನಮ್ಮ ವಿರೋಧ ಇದೆ. ಈಗಾಗಲೇ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಪೇ ಪಾರ್ಕಿಂಗ್ ಮಾಡುವುದರಿಂದ ಸಾರ್ವಜನಿಕರಿಗೆ ಇನ್ನಷ್ಟು ಹೊರೆಯಾಗುತ್ತಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದಡಿಯಲ್ಲಿ ನಂಬಿಕೆ ಇಲ್ಲದ ಅಧ್ಯಕ್ಷರು ಬಹುಮತ ಸಾಬಿತು ಪಡಿಸಲು ಅವಕಾಶ ನೀಡಲಿಲ್ಲ. ವಿರೋಧ ಪಕ್ಷದ ವಿರೋಧದ ನಡುವೆಯು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದರೆ ಕಾನೂನು ರೀತಿಯ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭವಿರೋಧ ಪಕ್ಷ ಸದಸ್ಯ ಡಿ.ಪಿ ರಾಜೇಶ್, ಸಿ.ಕೆ ಪೃಥ್ವಿನಾಥ್, ರಾಫಿ, ಮತೀನ್, ಅಗಸ್ಟಿನ್ ಬೆನ್ನಿ, ರಜನಿಕಾಂತ್, ಫಸಿಯಾ ತಬಸಮ್ ಪೇ ಪಾರ್ಕಿಂಗ್ ವ್ಯವಸ್ಥೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು.