ವಿರಾಜಪೇಟೆ ಮಾ.10 : ಸಮಾಜದಲ್ಲಿ ಸಂಘರ್ಷಗಳು ನಡೆಯುವುದು ಸಹಜ ಆದರೆ ಚುನಾವಣಾ ಹೊಸ್ತಿಲಲ್ಲಿ ಸಂಘರ್ಷಗಳು ನಡೆದರೆ ಸಹನೆಯಿಂದ ಸ್ವೀಕರಿಸಿ ಚುನಾವಣೆ ಎದುರಿಸಬೇಕು ಎಂದು ಕೆ.ಪಿ.ಸಿ.ಸಿ.ಕಾನೂನು ಘಟಕದ ರಾಜ್ಯ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರು ಭಾ.ಜ.ಪ. ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು ನಾವುಗಳು ಇಂದು ಚುನಾವಣಾ ಹೊಸ್ತಿಲಲ್ಲಿ ಇದ್ದೇವೆ. ಭಿನ್ನ ಪಕ್ಷದಲ್ಲಿ ಆಂತರಿಕ ಮತ್ತು ಇತರ ವಿಷಯಗಳ ಸಂಭಂದಿತ ವಿಚಾರಗಳಿಗೆ ಸಂಘರ್ಷಗಳು ನಡೆಯುವುದು ಸಹಜ. ಆದರೆ ಪಕ್ಷದ ಕಾರ್ಯಕರ್ತರು ಸಹನೆ ಕಳೆದುಕೊಳ್ಳದೆ ಶಾಂತಿಯಿಂದ ವರ್ತಿಸಬೇಕು, ಪಕ್ಷದ ಒಳಿತಿಗಾಗಿ ಪಕ್ಷದ ಅಭ್ಯರ್ಥಿಯನ್ನು ಜಯಗಳಿಸುವ ನಿಟ್ಟಿನಲ್ಲಿ ಸರ್ವರು ಶ್ರಮಿಸಬೇಕು ಎಂದರು.
ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಜೆ ಸೇರ್ಪಡೆಗೊಂಡ ಯುವ ವಕೀಲ ಸಿ.ಕೆ.ಪೊನ್ನಣ್ಣ ಅವರಿಗೆ ಇದೇ ಸಂದರ್ಭ ಅಭಿನಂದನೆ ಸಲ್ಲಿಸಲಾಯಿತು.
ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಇಂದು ಕ್ಷೇತ್ರದಲ್ಲಿ ಬದಲಾವಣೆಯ ಪರ್ವ ಕಾಣಿಸಿಕೊಂಡಿದೆ. ಜಿಲ್ಲೆಯ ಮೂಲಭೂತ ಸಮಸ್ಯೆಗಳಿಗೆ ತಾತ್ವಿಕ ಅಂತ್ಯ ಕಾಣಲು ಜಿಲ್ಲೆಯ ಮತದಾರ ಪ್ರಭುಗಳು ಕಾಯುತ್ತಿದ್ದಾರೆ. ಅದುದರಿಂದ ಕಾರ್ಯಕರ್ತರು ಶಕ್ತಿ ಮೀರಿ ಪಕ್ಷದ ಅಭ್ಯರ್ಥಿಯನ್ನು ಜಯಗಳಿಸಲು ಪ್ರತ್ನಿಸಬೇಕು ಎಂದು ಹೇಳಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಅವರ ನೇತೃತ್ವದಲ್ಲಿ ಭಾ.ಜ.ಪ ವಿರಾಜಪೇಟೆ ಮಂಡಲ ಸಾಮಾಜಿಕ ಜಾಲತಾಣದ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ವಕೀಲ ಚೋವಂಡ ಕೆ. ಪೊನ್ನಣ್ಣ ಅವರು ಭಾ.ಜ.ಪ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಬೆಂಬಲಿಗರೊಂದಿಗೆ ಪಕ್ಷದ ಧ್ವಜ ಸ್ವೀಕರಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಪಕ್ಷದ ಪ್ರಮುಖರು ಪಕ್ಷದ ಶಾಲು ಹೊದಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಚೆಂಬೆಬೆಳ್ಳೂರು ಗ್ರಾ.ಪಂ ಸದಸ್ಯ ಮತ್ತು ವಲಯ ಕಾಂಗ್ರೆಸ್ ಅಧ್ಯಕ್ಷ ಮೇಕತಂಡ ರಘು ಸುಬ್ಬಯ್ಯ, ವಿರಾಜಪೇಟೆ ಪುರಸಭಾ ಸದಸ್ಯ ರಾಜೇಶ್ ಪದ್ಮನಾಭ, ಮೊಹಮ್ಮದ್ ರಾಫಿ ಸೇರಿದಂತೆ ವಿವಿಧ
ವಲಯ ಅಧ್ಯಕ್ಷರು, ಕಾರ್ಯಕರ್ತರು ಹಾಜರಿದ್ದರು.
ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ವಕೀಲ ನರೇಂದ್ರ ಕಾಮತ್ ಸ್ವಾಗತಿಸಿದರು. ಜಿಲ್ಲಾ ಎಸ್.ಸಿ ಘಟಕದ ಅಧ್ಯಕ್ಷ ಸತೀಶ್ ಸರ್ವರನ್ನು ವಂದಿಸಿದರು.