ಮಡಿಕೇರಿ ಮಾ.10 : ( ವಿಶೇಷ ವರದಿ : ಬೊಳ್ಳಜಿರ ಬಿ. ಅಯ್ಯಪ್ಪ ) ಕೊಡವ ಕೌಟುಂಬಿಕ ಹಾಕಿ ಉತ್ಸವ ಇದು ಪತ್ರಕರ್ತ ಬಾಚರಣಿಯಂಡ ಅನು ಕಾರ್ಯಪ್ಪ ಬರೆದಿರುವ ಪುಸ್ತಕ. ದೇಶದಲ್ಲಿಯೇ ಹೆಸರು ಮಾಡಿರುವ ಕೊಡವ ಕೌಟುಂಬಿಕ ಹಾಕಿ ಹಬ್ಬ ಇದೀಗ 23 ನೇ ವರ್ಷಕ್ಕೆ ಕಾಲಿಟ್ಟಿದೆ. 1997 ರಲ್ಲಿ ಪಾಂಡಂಡ ಕುಟ್ಟಪ್ಪ ಅವರು ಆರಂಭ ಮಾಡಿದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹಬ್ಬದ ರೀತಿಯಲ್ಲಿ ನಡೆಯುತ್ತಿರುವುದು ಎಲ್ಲಾರಿಗೂ ತಿಳಿದಿದೆ.
ಕಳೆದ 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವ ಉತ್ತಮ ಬರಹಗಾರರು ಆಗಿರುವ ಬಾಚರಣಿಯಂಡ ಅನುಕಾರ್ಯಪ್ಪ ಕೊಡವ ಹಾಕಿ ಹಬ್ಬವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈ ಪುಸ್ತಕದಲ್ಲಿ 1997 ರಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಹಾಕಿ ಪಂದ್ಯಾವಳಿಯ ಬಗ್ಗೆ ಮಾಹಿತಿ ಅಡಕವಾಗಿದೆ. ಒಟ್ಟು 22 ವರ್ಷಗಳು ನಡೆದ ಹಾಕಿ ಪಂದ್ಯಾವಳಿಯ ಮಾಹಿತಿ , ಪಂದ್ಯಾವಳಿ ನಡೆಸಿದ ಕುಟುಂಬದ ಹಿನ್ನಲೆ, ಅದಕ್ಕೆ ಸಂಬಂಧಿಸಿದ ಫೋಟೊಗಳು, ಪಂದ್ಯಾವಳಿ ನಡೆಸಿದ ಕುಟುಂಬದ ಐನ್ ಮನೆ, ಕೈಮಡ ಚಿತ್ರಗಳು ಕೂಡ ಪುಸ್ತಕದಲ್ಲಿದೆ.ಇದರ ಜೊತೆಗೆ ,ಈ ಬಾರಿ ಹಾಕಿ ಹಬ್ಬ ನಡೆಸುತ್ತಿರುವ ಕುಟುಂಬದ ಮಾಹಿತಿ ಹಾಗೂ ಮುಂದಿನ 24ನೇ ವರ್ಷದ ಹಾಕಿ ಪಂದ್ಯಾವಳಿ ನಡೆಸುವ ಕುಟುಂಬದ ಮಾಹಿತಿ ಕೂಡ ಇದೆ. ಕೊಡವ ಹಾಕಿ ಅಕಾಡೆಮಿ ಯಾವಾಗ ಸ್ಥಾಪನೆ ಆಯಿತು. ಈಗ ಅಕಾಡೆಮಿ ಹೇಗಿದೆ. ಹಾಕಿ ಅಕಾಡೆಮಿಯ ಕೆಲಸ ಕಾರ್ಯಗಳೇನು? ಎಂಬ ವಿಷಯಗಳು ಪುಸ್ತಕದಲ್ಲಿ ದಾಖಲಾಗಿದೆ. ಅಲ್ಲದೆ ಯಾವ ವರ್ಷ ಯಾವ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾರತ ತಂಡ ಕೊಡವ ಹಾಕಿ ಉತ್ಸವದಲ್ಲಿ ಪಾಲ್ಗೊಂಡ ರೋಚಕ ಕ್ಷಣ ಹೇಗಿತ್ತು ಎಂಬ ಮಾಹಿತಿ ಇದೆ.
ಹಾಕಿ ಸಂಸ್ಥಾಪಕ ಪಾಂಡಂಡ ಕುಟ್ಟಪ್ಪ ಅವರ ಪರಿಚಯದ ಜೊತೆಗೆ ಒಲಂಪಿಯನ್ ಅಂಜಪರವಂಡ ಸುಬ್ಬಯ್ಯ ಅವರು ಮುನ್ನುಡಿಯನ್ನು ಬರೆದಿದ್ದಾರೆ.ವಿಶೇಷ ಎಂದರೆ ಕೊಡಗಿನ ಎಲ್ಲಾ ಹಾಕಿ ಒಲಂಪಿಯನ್ ಗಳ ಸಂಪೂರ್ಣ ಮಾಹಿತಿ ಈ ಪುಸ್ತಕದಲ್ಲಿದೆ.
ಬಾಚರಣಿಯಂಡ ಅನುಕಾರ್ಯಪ್ಪ ಅವರು ಈ ಮೊದಲು ಬೈತೂರು ಉತ್ಸವದ ಇತಿಹಾಸವನ್ನು ಡಿವಿಡಿ ರೂಪದಲ್ಲಿ ಹೊರತಂದಿದ್ದಾರೆ. ಇದೀಗ ಎರಡನೇ ಹೆಜ್ಜೆಯಾಗಿ ಕೊಡವ ಹಾಕಿ ಹಬ್ಬದ ಪುಸ್ತಕವನ್ನು ಬರೆದಿದ್ದಾರೆ. ಕೊಡವ (ಪದವಿ) ಪಠ್ಯ ಪುಸ್ತಕದಲ್ಲೂ ಇವರ ಲೇಖನವಿದೆ. ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಬಾಚರಣಿಯಂಡ ಅನುಕಾರ್ಯಪ್ಪ ಅವರ ಈ ಪುಸ್ತಕ ಎಲ್ಲಾರ ಮನೆ ಮನೆಯಲ್ಲಿ ದಾಖಲೆ ರೂಪದಲ್ಲಿ ಇಡಬೇಕಾಗಿದೆ. ಕೊಡವ ಹಾಕಿ ಪಂದ್ಯಾವಳಿ ಬಗ್ಗೆ ಏನೇ ಮಾಹಿತಿ ಬೇಕಾದರೂ ಈ ಪುಸ್ತಕವನ್ನು ನೋಡಿ ತಿಳಿದುಕೊಳ್ಳಬಹುದು. ಆರು ತಿಂಗಳ ಸತತ ಪರಿಶ್ರಮದಿಂದ ಪುಸ್ತಕವನ್ನು ಹೊರತರಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9482982228 ಸಂಪರ್ಕಿಸಬಹುದಾಗಿದೆ.
ಬೊಳ್ಳಜಿರ ಬಿ. ಅಯ್ಯಪ್ಪ
ಮಡಿಕೇರಿ.
ಮೊ.ಸಂ : 9880778047









