ಮಡಿಕೇರಿ ಮಾ.10 : ಜನ್ಮ ದಿನಾಂಕದ ಕುರಿತು ತಾವು ಸುಳ್ಳು ಮಾಹಿತಿ ನೀಡಿರುವುದಾಗಿ ವ್ಯಕ್ತಿಯೊಬ್ಬರು ತಮ್ಮ ವಿರುದ್ಧ ನೀಡಿರುವ ದೂರು ಅರ್ಥಹೀನವಾಗಿದೆ. ಪ್ರತಿ ಚುನಾವಣೆ ಸಂದರ್ಭ ವ್ಯವಸ್ಥಿತ ಗ್ಯಾಂಗ್ ಷಡ್ಯಂತ್ರ ನಡೆಸುತ್ತಿದ್ದು, ಇದಕ್ಕೆಲ್ಲ ನಾನು ಜಗ್ಗಲ್ಲ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ತಂದೆ ಹೆಬ್ಬೆಟ್ಟು, ಅವರು ಹೇಳಿದ ಜನ್ಮ ದಿನಾಂಕವನ್ನೇ ನಾನು ಅನುಸರಿಸುತ್ತಿದ್ದೇನೆ. ಚುನಾವಣಾ ಆಯೋಗ ನಮ್ಮ ವಯಸ್ಸನ್ನು ಕೇಳುತ್ತದೆ ಹೊರತು ಹುಟ್ಟಿದ ಇಸವಿಯನ್ನು ಕೇಳುವುದಿಲ್ಲ. ಮಾಹಿತಿ ಸಲ್ಲಿಸುವ ಸಂದರ್ಭ ಗಡಿಬಿಡಿಯಲ್ಲಿ ಸ್ವಲ್ಪ ಹೆಚ್ಚು, ಕಮ್ಮಿ ಆಗಿರಬಹುದು. ಇದು ದೊಡ್ಡ ಅಪರಾಧವೇನಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿ ಚುನಾವಣೆ ಬಂದಾಗಲೂ ಗ್ಯಾಂಗ್ ಒಂದು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಲೇ ಬರುತ್ತಿದೆ. ಕಳೆದ ಚುನಾವಣೆಯಲ್ಲಿ ನನ್ನ ಮನೆ ಅರಣ್ಯ ಭಾಗದಲ್ಲಿದೆ ಎಂದು ಆರೋಪಿಸಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತು, ಇದೀಗ ನನ್ನ ಜನ್ಮ ದಿನಾಂಕದ ಬಗ್ಗೆ ತಕರಾರು ತೆಗೆದಿದ್ದಾರೆ, ಇದಕ್ಕೆಲ್ಲ ನಾನು ಜಗ್ಗಲ್ಲ, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬೋಪಯ್ಯ ಹೇಳಿದರು.











