ಮಡಿಕೇರಿ ಮಾ.10 : ಕುಶಾಲನಗರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣದ ಸುಂಕದಳ್ಳಿ ಗ್ರಾಮ ನಿವಾಸಿ ನಿಶಾಂತ್.ಎಸ್.ಜಿ.(20) ಬಂಧಿತ ಆರೋಪಿಯಾಗಿದ್ದಾನೆ. ಈತನ ಬಳಿ ಇದ್ದ 170 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಮಾದಕ ವಸ್ತುಗಳ ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದು ತನಿಖಾ ತಂಡ ರಚಿಸಲಾಗಿತ್ತು. ಮಾ.9ರಂದು ಕುಶಾಲನಗರ ಗೌಡ ಸಮಾಜದ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಈ ತಂಡಕ್ಕೆ ಖಚಿತ ಮಾಹಿತಿ ಲಭಿಸಿತ್ತು. ದಾಳಿ ನಡೆಸಿದ ಆರೋಪಿಗಳು ಆರೋಪಿಯನ್ನು ವಶಕ್ಕೆ ಪಡೆದರು.
ಸೋಮವಾರಪೇಟೆ ಡಿವೈಎಸ್‍ಪಿ ಗಂಗಾಧರಪ್ಪ. ಆರ್.ವಿ, ಕುಶಾಲನಗರ ನಗರ ಪೊಲೀಸ್ ಠಾಣೆ ವೃತ್ತನಿರೀಕ್ಷಕ ಶ್ರೀಕಾಂತ್, ಉಪ ನಿರೀಕ್ಷಕ ಲೋಹಿತ್, ಹಾಗೂ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದರು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.
::: ಮಾಹಿತಿ ನೀಡಿ :::
ಯುವ ಸಮುದಾಯ ಮಾದಕ ವ್ಯಸನಿಗಳಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದನ್ನು ತಡೆಗಟ್ಟುವ ಸಲುವಾಗಿ ಮಾದಕ ವಸ್ತುಗಳನ್ನು ಬಳಸುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳು ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.









