ಸುಂಟಿಕೊಪ್ಪ,ಮಾ.10 : ಗ್ರಾ.ಪಂ ಗಳು ಜನರ ಆಶೋತ್ತರಗಳನ್ನು ಈಡೇರಿಸುವ ದೇವಾಲಯವಿದ್ದಂತೆ
ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.
ಸುಂಟಿಕೊಪ್ಪ ಗ್ರಾ.ಪಂ ವತಿಯಿಂದ ನಿರ್ಮಿಸಲಾದ ನೂತನ ಗ್ರಾ.ಪಂ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಗ್ರಾ.ಪಂ ನಿಧಿಯಿಂದ 5 ಲಕ್ಷ 12 ಸಾವಿರ ರೂ, 4ನೇ ಹಣಕಾಸು ನಿಧಿಯಿಂದ 7 ಲಕ್ಷ ರೂ.15ನೇ ಹಣಕಾಸು ನಿಧಿಯಿಂದ 8 ಲಕ್ಷ ರೂ ಶಾಸಕರ ನಿಧಿಯಿಂದ ರೂ. 5 ಲಕ್ಷ, ಎಂಜಿಎಸ್ ಶಾಸಕರ ನಿಧಿಯಿಂದ ರೂ.16 ಲಕ್ಷ, ಜಿ.ಪಂ.ನಿಂದ ರೂ.10 ಲಕ್ಷ ವೆಚ್ಚದಲ್ಲಿ ಉತ್ತಮವಾದ ಗ್ರಾ.ಪಂ.ಕಟ್ಟಡ ನಿರ್ಮಾಣವಾಗಿದೆ.
ತಾ.ಪಂ.ಅನುದಾನ 5 ಲಕ್ಷ ರೂ.ನಿಂದ ಡಿಜಿಟಲ್ ಗ್ರಂಥಾಲಯ, ಪ್ರತ್ಯೇಕ ನಿಧಿಯಿಂದ 5 ಲಕ್ಷ ರೂ.ವೆಚ್ಚದ ಶೌಚಾಲಯ ನಿರ್ಮಾವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ (275) ಗ್ರೇಡ್ 1 ಸುಂಟಿಕೊಪ್ಪ ಗ್ರಾ.ಪಂ ಗೆ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ನಬಾರ್ಡ್ ಯೋಜನೆಯಡಿ 3 ಕೋಟಿ ರೂ. ಮಂಜೂರಾತಿಯಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಬಿಜೆಪಿ ಸರಕಾರ ಎಲ್ಲಾ ಧರ್ಮ ಜಾತಿ, ಪಂಗಡ ವರ್ಗದವರಿಗೆ ಮೂಲಭೂತ ಸೌಕರ್ಯ ಒದಗಿಸಿದರೆ ಯುವ ಜನಾಂಗ ಸದೃಢ ಭಾರತ ಕಟ್ಟಲು ಮುಂದೆ ಬರಬೇಕು. ರಾಷ್ಟ್ರಭಕ್ತಿ, ರಾಷ್ಟ್ರಾಭಿಮಾನದಿಂದ ಸುಂದರ ಸಧೃಡ ಸಮಾಜ ಕಟ್ಟಲು ಸಾಧ್ಯವಾಗಲಿದೆ. ಗ್ರಾ.ಪಂ ಸದಸ್ಯರುಗಳು, ಅಧಿಕಾರಿಗಳು ಉತ್ತಮ ರೀತಿಯ ಜನೋಪಯೋಗಕಾರಿ ಕೆಲಸ ಮಾಡಬೇಕೆಂದು ಹೇಳಿದರು.
ಸುಂಟಿಕೊಪ್ಪ ಗ್ರಾ.ಪಂ ಗೆ 5 ಕೋಟಿ 91 ಲಕ್ಷ ರೂ. ವೆಚ್ಚದಲ್ಲಿ ಜಲಜೀವನ್ ಯೋಜನೆಯಡಿ ಕುಡಿಯುವ ನೀರಿನ ಯೋಜನೆ ಕಾರ್ಯಗತವಾಗಲಿದೆ. ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಲಭಿಸಲಿದೆ. 1965 ರಲ್ಲಿ ಪುರಸಭೆ ಆಗಿದ್ದ ಕಾಲದಿಂದ ಆಡಳಿತ ನಡೆಸಿದ ಜನಪ್ರತಿನಿಧಿಗಳನ್ನು ಸನ್ಮಾನಿಸುವ ಕೆಲಸ ಮಾಡಬೇಕೆಂದು ಶಾಸಕರು ಹೇಳಿದರು.
ಕೊಡಗು ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಗ್ರೇಡ್ 1 ಗ್ರಾ.ಪಂ ಆಗಿದ್ದು, ಪುರಸಭೆ ಆಗಿದ್ದಾಗ, ಇಬ್ರಾಹಿಂ ಮಾಸ್ಟರ್ ಅಧ್ಯಕ್ಷರಾಗಿದ್ದರು, ಟಿ.ಎ. ರಾಮರಾಜನಾಯ್ಡು ಉಪಾಧ್ಯಕ್ಷರಾಗಿ ದೂರದೃಷ್ಟಿಯಿಂದ ಕರ್ತವ್ಯ ನಿರ್ವಹಿಸಿ ಪಂಚಾಯಿತಿ ಅಭಿವೃದ್ಧಿ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನೂತನ ಮಾರುಕಟ್ಟೆಗೆ ಕನಿಷ್ಠ 2 ಎಕ್ರೆ ಜಾಗದ ಅವಶ್ಯಕತೆಯಿದ್ದು, ಹೈಟೆಕ್ ಮಾರುಕಟ್ಟೆ ನಿರ್ಮಿಸಲು ಶಾಸಕರು, ಗ್ರಾ.ಪಂ ಆಡಳಿತ ಮಂಡಳಿಗೆ ಮುಂದಾಗಬೇಕೆಂದರು.
ಗ್ರಾ.ಪಂ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಮಾತನಾಡಿ, ಗ್ರಾ.ಪಂ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಜಗಜ್ಯೋತಿಯಾಗಿದೆ. ಎಲ್ಲರ ಸಹಕಾರದಿಂದ ಬೃಹದಾಕಾರದಲ್ಲಿ ನಿರ್ಮಿಸಲಾದ ಗ್ರಾ.ಪಂ ನಿಂದ ಡಾ.ಅಂಬೇಡ್ಕರ್ ಅವರ ಆಶಯದಂತೆ ಸರ್ವರಿಗೂ ಸಮಪಾಲು ಮೂಲಭೂತ ಸೌಲಭ್ಯ ದೊರಕುವಂತಾಗಲಿ ಎಂದು ಹೇಳಿದರು.
ಸೋಮವಾರಪೇಟೆ ತಾ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ವಿ.ಜಯಣ್ಣ ಮಾತನಾಡಿ, ನೂತನ ಕಟ್ಟಡದಿಂದ ಜನರಿಗೆ ಮೂಲಭೂತ ಸೌಲಭ್ಯ ಸಿಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಹಾಗೂ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಪಿಡಿಓ ವೇಣುಗೋಪಾಲ್, ಜಿ.ಪಂ ಸಹಾಯಕ ಅಭಿಯಂತರ ಫಯಾಜ್, ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಗುತ್ತಿಗೆದಾರ ದೇವಿಪ್ರಸಾದ್, ಇಬ್ರಾಹಿಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಪಂಚಾಯಿತಿ ಸದಸ್ಯರುಗಳಾದ ಆಲಿಕುಟ್ಟಿ, ಎಂ.ಎಸ್.ಜಿನಾಸುದ್ದೀನ್, ಮಂಜುನಾಥ್, ರಫೀಕ್ ಖಾನ್, ಶಬೀರ್, ಪಿ.ಎಫ್.ಸಬಾಸ್ಟೀನ್, ಬಿ.ಎಂ.ಸುರೇಶ್, ಪಿ.ಆರ್.ಸುನಿಲ್ ಕುಮಾರ್, ಸೋಮನಾಥ್, ನಾಗರತ್ನ ಸುರೇಶ್, ಪಿ.ಜಿ.ಶಾಂತಿ, ಎನ್.ರೇಷ್ಮ, ಮಂಜುಳ, ಮಂಗಳ, ಹಸೀನ, ಮಾಜಿ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಮಾಜಿ ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಬಿ.ಕೆ.ಮೋಹನ್, ಮಾಜಿ ಅಧ್ಯಕ್ಷ ಕ್ಲಾಡಿಯಸ್ ಲೋಬೋ, ಪುರಸಭೆ ಮಾಜಿ ಸದಸ್ಯ ಎಂ.ಎ.ವಸಂತ, ತಾ.ಪಂ ಮಾಜಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾ.ಪಂ ಮಾಜಿ ಸದಸ್ಯೆ ಗಿರಿಜ ಉದಯಕುಮಾರ್, ಗ್ರಾ.ಪಂ ಲೆಕ್ಕಾಪರಿಶೋಧಕಿ ಚಂದ್ರಕಲಾ, ಪಂಚಾಯಿತಿ ಸಿಬ್ಬಂದಿಗಳಾದ ಶ್ರೀನಿವಾಸ್, ಸಂದ್ಯಾ, ಡಿ.ಎಂ.ಮಂಜುನಾಥ್ ಹಾಗೂ ಪೌರಕಾರ್ಮಿಕರು ಮತ್ತಿತರರು ಹಾಜರಿದ್ದರು.