ನಾಪೋಕ್ಲು ಮಾ.10 : ನಾಪೋಕ್ಲು ಸಮೀಪದ ಕೊಟ್ಟಮುಡಿಯ ಕೂರ್ಗ್ ಯೂತ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಮೊದಲನೇ ವರ್ಷದ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ಪೋಸ್ಟಲ್ ತಂಡ ಪ್ರಶಸ್ತಿಯನ್ನು ಮುಡುಗೇರಿಸಿಕೊಂಡಿದೆ.
ಸಮೀಪದ ಕೊಟ್ಟಮುಡಿ ಜಂಕ್ಷನ್ ಬಳಿಯ ಎಚ್ ಆಂಡ್ ಎಸ್ ಮೈದಾನದಲ್ಲಿ ನಡೆದ ಆಕರ್ಷಕ ಫೈನಲ್ ಪಂದ್ಯಾಟದಲ್ಲಿ ರಜಾಕ್ ಮಾಲಿಕತ್ವದ ಬೆಂಗಳೂರು ರೈಲ್ವೇಸ್ ತಂಡವನ್ನು ಮಣಿಸಿ ಪರವಂಡ ಸಿರಾಜ್ ಮಾಲಿಕತ್ವದ ಕರ್ನಾಟಕ ಪೋಸ್ಟಲ್ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಬೆಂಗಳೂರು ರೈಲ್ವೇಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಗೊಂಡಿತು.
ಇದಕ್ಕೂ ಮೊದಲು ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಹಾಗೂ ಕಾಂಗ್ರೆಸ್ಸಿನ ಯುವನಾಯಕ ಮಂತರ್ ಗೌಡ ಚೆಂಡಿನ ಪ್ರಯೋಗದೊಂದಿಗೆ ಪಂದ್ಯಾವಳಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಕೊಡಗು ಕ್ರೀಡೆಗೆ ಪ್ರಸಿದ್ಧವಾದ ಜಿಲ್ಲೆಯಾಗಿದೆ. ಆದರೂ ಗ್ರಾಮ ಮಟ್ಟದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಸಮರ್ಪಕ ಕ್ರೀಡಾ ಸೌಲಭ್ಯಗಳ ಕೊರತೆ ಇದೆ. ಇದರಿಂದ ಕ್ರೀಡಾ ಕ್ಷೇತ್ರದಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ.ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರ ಇದ್ದರೆ ಗ್ರಾಮಮಟ್ಟದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಯುವನಾಯಕ ಡಾ. ಮಂತರ್ ಗೌಡ ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಯುವಕರನ್ನು ಒಗ್ಗೂಡಿಸಲು ಆಯೋಜಿಸುವ ಇಂತಹ ಕ್ರೀಡಾಕೂಟ ಶ್ಲಾಘನೀಯ ಎಂದರು. ಯುವಪೀಳಿಗೆ ಕ್ರೀಡೆಯೊಂದಿಗೆ ಇನ್ನಿತರ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಮುಂದಾಗಬೇಕು.ಇದಕ್ಕೆ ಎಲ್ಲಾರಿತಿಯ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು . ಗ್ರಾಮೀಣ ಮಟ್ಟದ ಕ್ರೀಡಾಕೂಟಕ್ಕೆ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ ಇದರಿಂದ ಯುವ ಪ್ರತಿಭೆಗಳು ಮುಂದೆಬರಲು ಅಸಾಧ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯಅಬ್ರಾರ್, ನಾಪೋಕ್ಲು ಬ್ಲಾಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಹೊದ್ದೂರು ಗ್ರಾ.ಪಂ ಸದಸ್ಯ ಮೊಯ್ದು, ಸದಸ್ಯೆ ಅನಿತಾ, ಬಲ್ಲಮಾವಟಿ ಗ್ರಾ.ಪಂ. ಸದಸ್ಯ ಮಚ್ಚುರ ರವೀಂದ್ರ, ಪಂದ್ಯಾವಳಿಯ ಆಯೋಜಕರಾದ ಮೈಸಿ ಕತ್ತಣಿರ, ವಿನು ಮೂವೇರ,ಆಬಿದ್ ಕೊಟ್ಟಮುಡಿ, ಪ್ರಮುಖರಾದ ಆರ್.ಟಿ.ಐ. ಕಾರ್ಯಕರ್ತ ಹಾರಿಸ್, ದಯಾಕುಟ್ಟಪ್ಪ, ಮಾಜಿ ಆಟಗಾರ ಪೊಣ್ಣಚ್ಚಂಡ ಗೌತಂ, ವಿರಾಜಪೇಟೆ ಪ.ಪಂ ಸದಸ್ಯ ಮೊಹಮ್ಮದ್ ರಾಫಿ, ಮಾಲ್ತಾರೆ ಗ್ರಾ.ಪಂ ಸದಸ್ಯ ಶಮೀರ್, ಹಂಸ ಪಡಿಯಾಣಿ, ಶಾಮ್ ಕಾಳಯ್ಯ ಸೇರಿದಂತೆ ಮತ್ತಿತರ ಪ್ರಮುಖರು, ತಂಡಗಳ ನಾಯಕರು ಸದಸ್ಯರು ಮತ್ತಿತರರು ಹಾಜರಿದ್ದರು.
ಸನ್ಮಾನ ಕಾರ್ಯಕ್ರಮ : ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ವೈಯಕ್ತಿಕ ಪ್ರಶಸ್ತಿ ನೀಡಲಾಯಿತು. ಪಂದ್ಯಾವಳಿಗೆ ಅತಿಥಿಗಳಾಗಿ ಆಗಮಿಸಿದ ಗಣ್ಯರಿಗೆ ಕೂರ್ಗ್ ಯೂತ್ ಫ್ರೆಂಡ್ಸ್ ವತಿಯಿಂದ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಪಂದ್ಯಾವಳಿಯಲ್ಲಿ ವೀಕ್ಷಕ ವಿವರಣೆಯನ್ನು ಕೇರಳದ ಸುರೇಶ್ ಮತ್ತು ಅಮ್ಮತ್ತಿಯ ಆಸಿಫ್ ನೀಡಿದರು. ರಾಷ್ಟ್ರೀಯ ತೀರ್ಪುಗಾರರಾದ ಕೇರಳದ ರಾಜನ್ ಹಾಗೂ ರಂಜನ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು.
ಪಂದ್ಯಾವಳಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಅತಿಥಿ ಆಟಗಾರರನ್ನು ಒಳಗೊಂಡ ಎಲ್ಲಾ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು.