ಮಡಿಕೇರಿ ಮಾ.10 : ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕೊಡಗು ಜಿಲ್ಲಾ ಜಾತ್ಯಾತೀತ ಜನತಾದಳ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಎ.ವಿ ಶಾಲೆಯಿಂದ ಮೆರವಣಿಗೆ ಮೂಲಕ ಘೋಷಣೆಗಳೊಂದಿಗೆ ಸಾಗಿದ ಜೆಡಿಎಸ್ ಪ್ರಮುಖರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಸಿಲಿಂಡರ್‍ಗಳ ಅಣುಕು ಶವಯಾತ್ರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ನಗರ ಪ್ರದೇಶ ಮಾತ್ರವಲ್ಲದೇ ಹಳ್ಳಿಗಳಲ್ಲೂ ದಿನನಿತ್ಯ ಅಡುಗೆ ಅನಿಲಕ್ಕೆ ಜನರು ಅವಲಂಬಿತರಾಗಿದ್ದಾರೆ. ರೂ.450 ಇದ್ದ ಅಡುಗೆ ಇದೀಗ ರೂ.1140 ಕ್ಕೆ ಏರಿಕೆ ಮಾಡಲಾಗಿದೆ. ಹೀಗಾದರೆ ಜನಸಾಮಾನ್ಯರು ಬದುಕು ಕಟ್ಟಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಗಣೇಶ್, ಮದ್ಯಮ ವರ್ಗದ ಜನ, ಬಡವರು, ಆಟೋ ಚಾಲಕರು, ಕಾರು ಚಾಲಕರು, ಕೂಲಿ ಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೊಂದರೆಯಾಗಲಿದ್ದು, ಸರ್ಕಾರ ಬಡವರ ಮೇಲಿನ ಬೆಲೆ ಏರಿಕೆಯನ್ನು ಕಡಿಮೆಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಆಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಜೆ ಮೋಹನ್ ಮೌರ್ಯ, ಕಾರ್ಯದರ್ಶಿ ಎನ್.ಸಿ.ಸುನೀಲ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ನಾಗರಾಜು, ಕುಶಾಲನಗರ ಮಹಿಳಾ ಅಧ್ಯಕ್ಷೆ ಪದ್ಮ ಮಧು ಕುಮಾರ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ್, ಪ್ರಮುಖರಾದ ಲೀಲಾ ಶೇಷಮ್ಮ, ಸುನಂದ, ರವಿ ಕಿರಣ್ ಹಾಗೂ ಮತ್ತಿತರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.