ಮಡಿಕೇರಿ ಮಾ.11 : ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಅಭಿವೃದ್ಧಿ ಪರ ಚಿಂತನೆ, ಕಾರ್ಯಕರ್ತರ ಸಂಘಟನಾ ಶಕ್ತಿ, ಭಾರತೀಯ ಸಂಸ್ಕೃತಿಯ ಸಂರಕ್ಷಣೆ ಮತ್ತು ರಾಷ್ಟ್ರೀಯ ಚಿಂತನೆಗಳು, ಈ ನಾಲ್ಕು ಪ್ರಮುಖ ಅಂಶಗಳನ್ನು ಮುಂದಿಟ್ಟುಕೊoಡು ಬಿಜೆಪಿ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ನಗರದ ಕ್ರಿಸ್ಟಲ್ ಹಾಲ್ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಮತಯಾಚಿಸುವುದಾಗಿ ಹೇಳಿದರು.
ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ, ಈಗಿನ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಅಭ್ಯುದಯಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಗೊಳಿಸಲಾಗಿದೆ. ಸದಾನಂದ ಗೌಡರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಶಾಲೆ, ವಸತಿ ನಿಲಯಗಳಿಗಾಗಿಯೇ ರೂ.108 ಕೋಟಿ ಅನುದಾನವನ್ನು ಒದಗಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ರೂ.117 ಕೋಟಿ ನೆರವು ನೀಡಿದ್ದಾರೆ. ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ 27 ಮಂದಿ ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ಮತ್ತು 10 ಮಂದಿ ದಲಿತರಿಗೆ ಸಚಿವ ಸ್ಥಾನವನ್ನು ಒದಗಿಸಲಾಗಿದೆ. ಸ್ವಾತಂತ್ರ್ಯಾ ನಂತರದ ಅವಧಿಯಲ್ಲಿ ಇಷ್ಟು ಸಂಖ್ಯೆಯಲ್ಲಿ ಹಿಂದುಳಿದ ಸಮೂಹಕ್ಕೆ ಅವಕಾಶವನ್ನು ಎಂದಿಗೂ ನೀಡಿದ ನಿದರ್ಶನವಿಲ್ಲವೆಂದು ಅಭಿಪ್ರಾಯಪಟ್ಟರು.
ಬಿಜೆಪಿಯನ್ನು ನಿರಂತರವಾಗಿ ಟೀಕಿಸುತ್ತಾ ಬರುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಗ್ಯ ಕ್ಷೇತ್ರವೇ ಇಲ್ಲ. ಚುನಾವಣಾ ಹಂತದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರವರ ಜಾತಿ ಸಮೂಹದಿಂದ ಮುಖ್ಯಮಂತ್ರಿಯ ಬೇಡಿಕೆಯನ್ನು ಮುಂದಿರಿಸಿಕೊಂಡು ಬರುತ್ತಿದ್ದಾರೆ. ಬಿಜೆಪಿಯನ್ನು ಪುರೋಹಿತ ಶಾಹಿ, ಮನುವಾದಿ ಎಂದು ದೂರುವ ಇವರುಗಳೇ ಜಾತಿವಾದಿಗಳೆಂದು ಟೀಕಿಸಿದರು.
ಬಿಜೆಪಿಯ ಗೋ ಸಂರಕ್ಷಣೆ, ಮತಾಂತರ ನಿಷೇಧಗಳ ವಿರುದ್ಧ ಮಾತನಾಡುವ ಕಾಂಗ್ರೆಸ್ ಮುಖಂಡರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ, ಮತಾಂತರ ಪರವಾಗಿ, ಗೋ ಹತ್ಯೆಯ ಪರವಾಗಿ ನಾವಿದ್ದೇವೆಂದು ತೋರಿಸಲಿ ಎಂದು ಸವಾಲೊಡ್ಡಿದರು.
ಸಿದ್ದರಾಮಯ್ಯ ಅವರದ್ದು ಬಿಜೆಪಿ ವಿರುದ್ಧದ ಟೀಕೆಗಳು ‘ನಾಟಕೀಯ ಬುಡುಬುಡಿಕೆ’ ಯಾಗಿದೆ. ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಪರವಾಗಿ ಕಾಂಗ್ರೆಸ್ ಇರುವುದಾಗಿ ಹೇಳುವ ಅವರು, ಮುಖ್ಯಮಂತ್ರಿಯಾಗಿದ್ದ ಹಿಂದುಳಿದ ವರ್ಗದಿಂದ ಬಂದ ತನಗೆ ಮುಖ್ಯಮಂತ್ರಿ ಸ್ಥಾನ ದೊರಕಿದೆಯೆಂದು ಹೇಳಿಕೊಂಡರೆ ಹೊರತು ಆ ಸಮೂಹಕ್ಕೆ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದ ಈಶ್ವರಪ್ಪ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದುಳಿದ, ದಲಿತ ಸೇರಿದಂತೆ ಎಲ್ಲಾ ಸಮೂಹದ ಹಿತ ಕಾಯುವ ಕೆಲಸ ನಡೆದಿದೆಯೆಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅಧಿಕಾರ ದೊರೆತಾಗ ಅದನ್ನು ಹೇಗೆ ಸದ್ವಿನಿಯೋಗ ಪಡಿಸಬೇಕೆನ್ನುವುದನ್ನು ಕಳೆದ 8 ವರ್ಷಗಳ ಅವಧಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಚುನಾವಣೆ ಎನ್ನುವುದು ಕೇವಲ ಆಶ್ವಾಸನೆ, ಭರವಸೆಗಳ ಮೇಲೆ ನಡೆಯಕೂಡದೆನ್ನುವುದು ಪಕ್ಷದ ನಿಲುವಾಗಿದೆ. ಅಭಿವೃದ್ಧಿಯನ್ನು ಪರಿಗಣಿಸಿ ಜನತೆ ಮತದಾನ ಮಾಡಿದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥ ಬರುತ್ತದೆಂದು ಹೇಳಿದರು.
ನಾಲ್ಕು ರಥಯಾತ್ರೆಗಳ ಮೂಲಕ ರಾಜ್ಯದ 224 ಕ್ಷೇತ್ರಗಳ ಜನತೆಯನ್ನು ಬಿಜೆಪಿ ಸಂಪರ್ಕಿಸುತ್ತಿದೆ. ಈ ಸಂದರ್ಭ ದೊರಕುತ್ತಿರುವ ಜನಬೆಂಬಲ ಅಭೂತಪೂರ್ವ, ಚುನಾವಣೆಯಲ್ಲಿ ಬಿಜೆಪಿಯನ್ನು ಜನತೆ ಆಶೀರ್ವದಿಸುವ ಪೂರ್ಣ ವಿಶ್ವಾಸವಿದೆಯೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಎಂಎಲ್‌ಸಿ ಸುಜಾ ಕುಶಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ವಿರಾಜಪೇಟೆ ಕ್ಷೇತ್ರದ ಉಸ್ತುವಾರಿ ಪ್ರತಾಪ ಸಿಂಹ ನಾಯಕ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ತಿಮ್ಮಯ್ಯ ಶೆಟ್ಟರು, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಎಂಎಲ್‌ಸಿ ಎಸ್.ಜಿ.ಮೇದಪ್ಪ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ರಾಜ್ಯ ಸಂಚಾಲಕ ಉದಯ ಕುಮಾರ್ ಶೆಟ್ಟರು, ಪಕ್ಷದ ಪ್ರಮುಖರಾದ ರಾಜೇಂದ್ರ‍್ರ, ಮಹೇಶ್ ಜೈನಿ ಮೊದಲಾದವರಿದ್ದರು.
Breaking News
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನ.24 ರಂದು ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆ*
- *ಕುಶಾಲನಗರದಲ್ಲಿ ಅಕ್ಷರ ಜ್ಯೋತಿ ಯಾತ್ರೆಗೆ ಸ್ವಾಗತ : ಉತ್ತಮ ಸಂಸ್ಕಾರ, ಸದ್ಗುಣ ಬೆಳೆಸಿಕೊಳ್ಳಲು ಬಸವಕುಮಾರ್ ಪಾಟೀಲ್ ಕರೆ*
- *ನ.29 ರಂದು ಮೂರ್ನಾಡುವಿನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ*