ಮಡಿಕೇರಿ ಮಾ.13 : ತೋಟದಲ್ಲಿದ್ದ ನೀರು ಸಂಗ್ರಹದ ತೊಟ್ಟಿಗೆ ಆಯತಪ್ಪಿ ಬಿದ್ದ ಕಾಡೆಮ್ಮೆಯನ್ನು ಅರಣ್ಯ ಇಲಾಖೆ ಹಾಗೂ ಸ್ಥಳೀಯರು ರಕ್ಷಿಸಿರುವ ಘಟನೆ ಶನಿವಾರಸಂತೆಯ ಎಳನೀರುಗುಂಡಿ ಎಂಬಲ್ಲಿ ನಡೆದಿದೆ.
ತಾಪಾಮಾನ ಹೆಚ್ಚಾಗುತ್ತಿರುವಂತೆ ನೀರು ಮತ್ತು ಆಹಾರದ ಕೊರತೆಯನ್ನು ಎದುರಿಸುತ್ತಿರುವ ವನ್ಯಜೀವಿಗಳು ತೋಟದ ಫಸಲು ಮತ್ತು ಕೆರೆಗಳೆಡೆಗೆ ಮುಖ ಮಾಡುತ್ತಿವೆ. ಇಂದು ನೀರು ಕುಡಿಯಲೆಂದು ಎಳನೀರುಗುಂಡಿ ಗ್ರಾಮದ ಎಸ್ಟೇಟ್ ಗೆ ನುಗ್ಗಿದ ಕಾಡೆಮ್ಮೆ ನೀರು ಸಂಗ್ರಹದ ತೊಟ್ಟಿ ಬಳಿ ಸಾಗಿದೆ. ನೀರು ಕುಡಿಯುವ ಪ್ರತ್ನದಲ್ಲಿದ್ದಾಗ ಆಯತಪ್ಪಿ ತೊಟ್ಟಿಗೆ ಬಿದ್ದಿದೆ. ನೀರಿನಲ್ಲಿ ಕಾಡೆಮ್ಮೆ ಪರದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಬಂದ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ನೇತೃತ್ವದ ತಂಡ ತೋಟದ ಮಾಲೀಕರು ಹಾಗೂ ಕಾರ್ಮಿಕರ ಸಹಕಾರದಿಂದ ಕಾರ್ಯಾಚರಣೆ ನಡೆಸಿದರು. ಜೆಸಿಬಿ ಯಂತ್ರದ ಮೂಲಕ ನೀರಿನ ತೊಟ್ಟಿಯ ಒಂದು ಭಾಗದಲ್ಲಿ ಕಾಡೆಮ್ಮೆ ಮೇಲೆ ಬರಲು ದಾರಿ ಮಾಡಿಕೊಡಲಾಯಿತು. ನಂತರ ಮೇಲೆ ಬಂದ ಕಾಡೆಮ್ಮೆಯನ್ನು ಅರಣ್ಯ ಸಿಬ್ಬಂದಿಗಳು ಕಾಡಿಗಟ್ಟುವಲ್ಲಿ ಯಶಸ್ವಿಯಾದರು.
ವರದಿ : ದಿನೇಶ್ ಮಾಲಂಬಿ (ಶನಿವಾರಸಂತೆ)