ಮಡಿಕೇರಿ ಮಾ.13 : ಭಾವೈಕ್ಯತೆಯ ಕೇಂದ್ರವಾಗಿ ಪ್ರಸಿದ್ಧವಾಗಿರುವ ಕೊಡಗು-ದಕ್ಷಿಣ ಕನ್ನಡ ಗಡಿ ಭಾಗದ ಪೇರಡ್ಕದ ದರ್ಗಾ ಶರೀಫ್ ಆವರಣದಲ್ಲಿ ಎಸ್‍ಕೆಎಸ್‍ಎಸ್‍ಎಫ್ ಗೂನಡ್ಕ ಶಾಖೆಯ ವತಿಯಿಂದ ಮಾ.19 ರಂದು ದ್ವಿತೀಯ ವರ್ಷದ ‘ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್’ ಹಾಗೂ ಮಜ್ಲಿಸ್‍ನ್ನೂರು ವಾರ್ಷಿಕ ಕಾರ್ಯಕ್ರಮ ನಡೆಯಲಿದೆ.
ಸುದ್ದಿ ಗೋಷ್ಠಿಯಲ್ಲಿ ಈ ಕುರಿತ ಮಾಹಿತಿ ನೀಡಿದ ಪೇರಡ್ಕ ಜಮಾಅತ್‍ನ ಗೌರವಾಧ್ಯಕ್ಷರಾದ ಶಾಹೀದ್ ತೆಕ್ಕಿಲ್, ಪೇರಡ್ಕ ದರ್ಗಾ ಶರೀಫ್ ವಠಾರದ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆಯಲಿರುವ ನೂರೇ ಅಜ್ಮೀರ್ ಮಜ್ಲಿಸ್ ಕಾರ್ಯಕ್ರಮದ ನೇತೃತ್ವವನ್ನು ಕೇರಳದ ಕಲ್ಲಿಕೋಟೆಯ ಮಲಪುರಂನ ಖ್ಯಾತ ಧಾರ್ಮಿಕ ಉಪನ್ಯಾಸಕರಾದ ಉಸ್ತಾದ್ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ವಹಿಸಿ ನಡೆಸಿಕೊಡಲಿದ್ದಾರೆ. ಮೊಹಮದ್ ಪೈಗಂಬರರ ತತ್ತ್ವಾದರ್ಶಗಳನ್ನು ಜನರಿಗೆ ತಲುಪಿಸುವುದು ಮತ್ತು ಅವರ ಸಂಕೀರ್ತನೆಗಳನ್ನು ಹೇಳುವುದು ನೂರೇ ಅಜ್ಮೀರ್‍ನ ಮುಖ್ಯ ಉದ್ದೇಶವಾಗಿದೆಯೆಂದು ಹೇಳಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಮಿಯತ್ ಉಲೆಮಾ ಸಂಘಟನೆಯ ಅಧ್ಯಕ್ಷರಾದ ಸೈಯ್ಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ, ಖ್ಯಾತ ವಾಗ್ಮಿಗಳಾದ ಉಸೈನ್ ದಾರಿಮಿ ರೆಂಜಿಲಾಡಿ, ಎಮ್ಮೆಮಾಡು ಖತೀಬರಾದ ರಿಯಾಝ್ ಪೈಝಿ ಪಾಲ್ಗೊಳ್ಳಲಿದ್ದಾರೆಂದು ಮಾಹಿತಿಯನ್ನಿತ್ತರು.
ಅಂದು ಸಂಜೆ 5.30 ಗಂಟೆಗೆ ಜಮಾಯತ್ ಗೌರವಾಧ್ಯಕ್ಷನಾದ ತಾನು ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆಯೆಂದು ತಿಳಿಸಿದ ಶಾಹೀದ್ ತೆಕ್ಕಿಲ್, ಸಂಜೆ 6 ಗಂಟೆಗೆ ಮಜ್ಲಿಸ್‍ನ್ನೂರು ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8 ರಿಂದ 11 ಗಂಟೆಯವರೆಗೆ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್. ನಂತರ ಅನ್ನದಾನ ನಡೆಯಲಿದೆಯೆಂದು ತಿಳಿಸಿದರು.
ಏಳು ಸಾವಿರ ಮಂದಿಯ ನಿರೀಕ್ಷೆ- ಕಾರ್ಯಕ್ರಮದಲ್ಲಿ ಏಳು ಸಾವಿರಕ್ಕೂ ಹೆಚ್ಚಿನ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕೊಡಗು ವಿಭಾಗದಿಂದ 3 ಸಾವಿರಕ್ಕೂ ಹೆಚ್ಚಿನ ಮಂದಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ಗೋಷ್ಠಿಯಲ್ಲಿ ಸುಳ್ಯ ಎಸ್‍ಕೆಎಸ್‍ಎಸ್‍ಎಫ್ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರು, ನೂರೇ ಅಜ್ಮೀರ್ ಮಜ್ಲಿಸ್‍ನ ರಾಜ್ಯ ಮುಖ್ಯಸ್ಥರಾದ ಮುನೀರ್ ದಾರಿಮಿ, ದಕ್ಷಿಣ ಕನ್ನಡದ ಸಂಪಾಜೆ ಗ್ರಾಪಂ ಸದಸ್ಯರಾದ ಅಬುಶಾಲಿ, ಎಸ್‍ಕೆಸ್‍ಎಸ್‍ಎಫ್ ಗೂನಡ್ಕದ ಅಧ್ಯಕ್ಷರಾದ ಸಾಜಿದ್ ಅಝ್ಹರಿ, ಎಸ್‍ಕೆಎಸ್‍ಎಸ್‍ಎಫ್ ಗೂನಡ್ಕದ ಕಾರ್ಯದರ್ಶಿ ಜುರೈದ್ ತೆಕ್ಕಿಲ್ ಉಪಸ್ಥಿತರಿದ್ದರು.