ಸೋಮವಾರಪೇಟೆ ಮಾ.13 : ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ಯುವಶಕ್ತಿ ಸಂಗಮ ಕಾರ್ಯಕ್ರಮದ ಅಂಗವಾಗಿ ಯುವಮೋರ್ಚಾ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಬೈಕ್ ಜಾಥ ನಡೆಸಿದರು.
ನಂತರ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸಮಾವೇಶದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೊಡಗಿನ ಜನ ರಾಷ್ಟ್ರ ಪ್ರೇಮಕ್ಕೆ ಹೆಸರಾದವರು. ಇಂದು ಜಿಲ್ಲೆಯಲ್ಲಿ ಯುವಶಕ್ತಿಯೂ ಬಿಜೆಪಿ ಬೆಂಬಲಕ್ಕೆ ನಿಂತಿದೆ. ನಾವೀಗ ಭಾರತವನ್ನು ಕಾಂಗ್ರೆಸ್ ಮುಕ್ತ ದೇಶವನ್ನಾಗಿಸುವ ಸಂಕಲ್ಪ ತೊಡಬೇಕಾಗಿದೆ. ದೇಶದಲ್ಲಿ ಮತ್ತೆ ಭ್ರಷ್ಟಾಚಾರ ತಲೆ ಎತ್ತದಂತೆ ನೋಡಿಕೊಳ್ಳಬೇಕಿದೆ ಎಂದರು.
ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದೆ, ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದೇವೆ. ಶಾಸಕ ಅಪ್ಪಚ್ಚು ರಂಜನ್ ಅವರು ಅನೇಕ ರಸ್ತೆಗಳ ಅಭಿವೃದ್ಧಿ ಯೋಜನೆಗೆ ಸರ್ಕಾರದಿಂದ ಅಗತ್ಯ ಅನುದಾನ ತರುವಲ್ಲಿ ಸಫಲರಾಗಿದ್ದಾರೆ. ಮಡಿಕೇರಿ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಕಾರಣರಾಗಿದ್ದಾರೆ ಎಂದರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಇಲ್ಲಿಯವರೆಗೆ ಜಿಲ್ಲೆಗೆ ಯಾವುದೇ ಸರ್ಕಾರಗಳು ನೀಡದಂತ ಅನೇಕ ಕೊಡುಗೆಗಳನ್ನು ಬಿಜೆಪಿ ನೀಡಿದೆ. ಕಾಂಗ್ರೆಸ್ ಸರ್ಕಾರ ಕೇವಲ ವೋಟ್ ಬ್ಯಾಂಕಿಗಾಗಿ ಮಾತ್ರ ಹಿಂದುಳಿದ ಸಮುದಾಯಗಳನ್ನು ಬಳಕೆ ಮಾಡುತ್ತಿತ್ತು, ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಂಥ ಸಮುದಾಯಗಳ ಸಮಸ್ಯೆ ಗಮನಿಸಿ ಸಂಕಷ್ಟ ಪರಿಹಾರಕ್ಕೆ ಸೂಕ್ತ ರೀತಿಯಲ್ಲಿ ಮುಂದಾಗಿದೆ ಎಂದರು.
ಕಳೆದ 25 ವರ್ಷಗಳಿಂದ ಶಾಸಕರು ಜಿಲ್ಲೆಯಲ್ಲಿ ಏನು ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ನವರು ಕೇಳುತ್ತಿದ್ದಾರೆ. ಚಿಕ್ಕ ಆಳುವಾರದಲ್ಲಿ ವಿಶ್ವವಿದ್ಯಾಲಯ ಮಾಡಿದ್ದೇವೆ ಕುಶಾಲನಗರದಲ್ಲಿ ಇಂಜಿನಿಯರಿಂಗ್ ಕಾಲೇಜ್, ಮಡಿಕೇರಿಯ ವೈದ್ಯಕೀಯ ಕಾಲೇಜ್, ಕೂಡಿಗೆ ಸೈನಿಕ ಶಾಲೆ ಇವೆಲ್ಲ ಶೈಕ್ಷಣಿಕ ಕ್ರಾಂತಿಗೆ ಕಾರಣವಾಗಿದೆ. ಇದೆಲ್ಲ ಮಡಿಕೇರಿ ಕ್ಷೇತ್ರದ ಅಭಿವೃದ್ಧಿ ಅಲ್ಲವೇ ಎಂದು ಕಾಂಗ್ರೆಸಿಗರನ್ನು ಪ್ರಶ್ನಿಸಿದರು.
ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾಕ್ಟರ್ ಸಂದೀಪ್ ಮಾತನಾಡಿ, ಕೋವಿಡ್ ಸಂಕಷ್ಟದ ದಿನಗಳಲ್ಲಿ ದೇಶದಲ್ಲಿ ಅತ್ಯಂತ ಸಕ್ರಿಯವಾಗಿ ಜನರ ನೆರವಿಗೆ ಧಾವಿಸಿದ ಕೀರ್ತಿ ಬಿಜೆಪಿ ಯುವ ಮೋರ್ಚಾದಾಗಿದೆ. ಯುವಕರಲ್ಲಿ ರಾಷ್ಟ್ರ ನಿರ್ಮಾಣ ದೇಶಭಕ್ತಿಯ ಚಿಂತನೆ ನೀಡುವ ಏಕೈಕ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಯುವ ಪೀಳಿಗೆಯಲ್ಲಿ ಭಾರತದ ಐಕ್ಯತೆಯ ನಿಟ್ಟಿನಲ್ಲಿ ಬಹಳ ದೊಡ್ಡ ಜವಾಬ್ದಾರಿ ಇದೆ. ಆರೋಗ್ಯ ಶಿಕ್ಷಣ ರಸ್ತೆ ನೀರು ಸೇರಿದಂತೆ ಮೂಲ ಸೌಲಭ್ಯಗಳಿಗೆ ಬಿಜೆಪಿ ನೀಡಿದಷ್ಟು ಯೋಜನೆ ಬೇರೆ ಯಾವ ಸರ್ಕಾರಗಳು ನೀಡಿಲ್ಲ. ಯುವ ಜನಾಂಗಕ್ಕೆ ಉದ್ಯೋಗಾವಕಾಶಗಳಿಗೂ ಸಾಲ ಸೌಲಭ್ಯದ ಮೂಲಕ ಬಿಜೆಪಿ ನೆರವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ದರ್ಶನ ಜೋಯಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಪಕ್ಷದ ಪ್ರಮುಖರಾದ ವಿ.ಕೆ.ಲೋಕೇಶ್, ಭಾರತೀಶ್, ರವಿ ಕಾಳಪ್ಪ ಸೇರಿದಂತೆ ಬಿಜೆಪಿ ಮತ್ತು ಯುವ ಮೋರ್ಚದ ಪದಾಧಿಕಾರಿಗಳು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.









