ಮಡಿಕೇರಿ ಮಾ.13 : ರಾಜ್ಯಾದ್ಯಂತ ಬಿಜೆಪಿ ಯುವಮೋರ್ಚಾದ ವತಿಯಿಂದ ನಡೆಯುತ್ತಿರುವ ಪ್ರಗತಿ ರಥ ಯಾತ್ರೆಯ 2 ವಾಹನಗಳು ಈಗಾಗಲೇ ಕೊಡಗಿನಲ್ಲಿ ಸಂಚರಿಸುತ್ತಿದ್ದು, ಮಾರ್ಚ್ 14 ರ ಮಂಗಳವಾರ ದಿಂದ ಮಡಿಕೇರಿ ಗ್ರಾಮಾಂತರ ಮಂಡಲದ ಎಲ್ಲಾ ಗ್ರಾಮಗಳಲ್ಲಿ ಸುಮಾರು 9 ರಿಂದ 10 ದಿನಗಳವರೆಗೆ ಸಂಚರಿಸಲಿದೆ ಎಂದು ಪ್ರಗತಿ ರಥ ಯಾತ್ರೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಸಹಪ್ರಭಾರಿ ಮತ್ತು ಮಡಿಕೇರಿ ಗ್ರಾಮಾಂತರ ಮಂಡಲ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಚೇತನ್ ಬಂಗೇರ ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 27ರಿಂದ ಕೊಡಗಿನಲ್ಲಿ ಆರಂಭವಾಗಿರುವ ಪ್ರಗತಿ ರಥಯಾತ್ರೆಯ 1 ವಾಹನ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು, ಇನ್ನೊಂದು ವಾಹನ ಈಗಾಗಲೇ ವಿರಾಜಪೇಟೆ ಮತ್ತು ಗೋಣಿಕೊಪ್ಪ ತಾಲ್ಲೂಕಿನಾದ್ಯಂತ ಸಂಚರಿಸಿ ಮಡಿಕೇರಿ ಗ್ರಾಮಂತರ ಪ್ರದೇಶಗಳಿಗೆ ಹೊರಡಲು ಸಿದ್ದವಾಗಿದೆ.
ಮಾರ್ಚ್ 14 ರಿಂದ ಆರಂಭವಾಗಿ ಮಾರ್ಚ್ 22ರ ವರೆಗೆ ಮಡಿಕೇರಿ ಗ್ರಾಮಾಂತರ ಮಂಡಲಕ್ಕೆ ಒಳಪಡುವ ಒಟ್ಟು 25 ಗ್ರಾಮ ಪಂಚಾಯತ್ (ಶಕ್ತಿಕೇಂದ್ರ) ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಅಂದರೆ ಪೆರಾಜೆ ಯಿಂದ ಆರಂಭವಾಗಿ ಸರ್ಕಾರದ ಸಾಧನೆಯನ್ನು ಬಿಂಬಿಸುವ ಪ್ರಗತಿ ರಥ ಯಾತ್ರೆಯು ಹೋಸ್ಕೆರಿಯಲ್ಲಿ ಮಾ.22ರಂದು ಕೊನೆಗೊಳ್ಳಲಿದೆ.
ಈ ರಥ ಯಾತ್ರೆ ಸಂಚರಿಸುವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಪ್ರಮುಖರು, ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು, ಪಕ್ಷದ ಕಾರ್ಯಕರ್ತರು,ಗ್ರಾಮಸ್ಥರು ಭಾಗವಹಿಸಿ ಪ್ರಗತಿ ರಥ ಯಾತ್ರೆಯನ್ನು ಯಶಸ್ವಿಗೊಳಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಂಡು ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ನೇತತ್ವದ ಸರಕಾರ ಆಡಳಿತಕ್ಕೆ ಬರಲು ಸಹಕರಿಸಬೇಕಾಗಿ ಚೇತನ್ ಬಂಗೇರ ವಿನಂತಿಸಿಕೊಂಡಿದ್ದಾರೆ.