ಸುಂಟಿಕೊಪ್ಪ ಮಾ.13 : ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ನಡೆಯಲಿರುವ 2022-23ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಫುಟ್ ಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡದ ಕ್ಯಾಪ್ಟನ್ ಆಗಿ ಸುಂಟಿಕೊಪ್ಪ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿ. ಹೆಚ್. ವೇಣುಗೋಪಾಲ್ ಅವರು ಆಯ್ಕೆಯಾಗಿದ್ದಾರೆ. ತಾ. 18 ರಿಂದ 23ರ ವರೆಗೆ ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿರುವ ಕಳಿಂಗ ಸ್ಟೇಡಿಯಂ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ರಾಷ್ಟ್ರಮಟ್ಟದ ನಾಗರಿಕ ಸೇವಾ ಫುಟ್ ಬಾಲ್ ಪಂದ್ಯಾಟ ನಡೆಯಲಿದ್ದು ವೇಣುಗೋಪಾಲ್ ಅವರು 20 ಮಂದಿ ಫುಟ್ ಬಾಲ್ ಆಟಗಾರರನ್ನು ಒಳಗೊಂಡ ಕರ್ನಾಟಕ ರಾಜ್ಯದ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಅಖಿಲ ಭಾರತ ನಾಗರಿಕ ಸೇವಾ ಫುಟ್ ಬಾಲ್ ಪಂದ್ಯಾಟದಲ್ಲಿಯೂ ಕೂಡ ಮೂಲತಃ ಸೋಮವಾರಪೇಟೆ ತಾಲೂಕಿನ ಬೀಟಿಕಟ್ಟೆಯವರಾಗಿರುವ ವೇಣುಗೋಪಾಲ್ ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದರು.










