ಸೋಮವಾರಪೇಟೆ ಮಾ.14 : ತುರ್ತು ಸಂದರ್ಭದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡ ನೆರವಿಗೆ ಬರಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರೋಹಿತ್ ತಿಳಿಸಿದರು.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಅಪಘಾತ ಮುಂತಾದ ತುರ್ತು ಸಂದರ್ಭದಲ್ಲಿ ನೆರವಿಗೆ ಧಾವಿಸಬೇಕೆಂಬ ಸದಾಶೆಯಿಂದ ಶ್ರೀ ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶೌರ್ಯ ವಿಪತ್ತು ನಿರ್ವಹಣಾ ತಂಡವನ್ನು ರಚಿಸಿ ತರಬೇತಿ ಗೊಳಿಸಿದ್ದಾರೆ. ಇದರಲ್ಲಿ ಈಜುಗಾರ, ಮರ ಹತ್ತುವವರು, ಚಾಲಕರು ಸೇರಿದಂತೆ ಇನ್ನಿತರ ಪರಿಣಿತರು ಇದ್ದು, ಅಗತ್ಯ ಸಂದರ್ಭ ತಂಡದ ಮುಖ್ಯಸ್ಥ ರಾಮ್‌ದಾಸ್ ಅವರನ್ನು 9632102124 ಸಂಪರ್ಕಿಸಬಹುದು ಎಂದರು.
ಈ ಸಂದರ್ಭ ಶಸ್ತ್ರ ಚಿಕಿತ್ಸಕರಾದ ಡಾ.ಸತೀಶ್ ಮಾತನಾಡಿ, ಕೊವಿಡ್ ನಂತಹ ಸಂದರ್ಭದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಬಗ್ಗೆ ಸ್ಮರಿಸಿಕೊಂಡ ಅವರು ಅಗತ್ಯ ಸಂದರ್ಭದಲ್ಲಿ ಆಸ್ಪತ್ರೆಯೊಂದಿಗೆ ಕೈ ಜೋಡಿಸಬೇಕೆಂದು ತಿಳಿಸಿದರು.
ತಾಲೂಕು ಆಡಳಿತ ಮುಖ್ಯಸ್ಥರಾದ ತಹಶೀಲ್ದಾರ್ ಎಸ್.ಎನ್.ನರಗುಂದ, ಅಗ್ನಿ ಶಾಮಕ ಠಾಣೆ ಹಾಗೂ ಪೊಲೀಸ್ ಅಧಿಕಾರಿಗಳನ್ನು ಭೇಟಿಮಾಡಿ ತಂಡದ ಪರಿಚಯ ಹಾಗೂ ಮಾಹಿತಿ ನೀಡಿದರು.