ನಾಪೋಕ್ಲು ಮಾ.14 : ನಾಪೋಕ್ಲು ಸುತ್ತಮುತ್ತಲಿನ ಪ್ರದೇಶಗಳಿಗೆ ಅರ್ಧ ಇಂಚು ಮಳೆಯಾಗಿದ್ದು, ಸಕಾಲಿಕ ಮಳೆಯಿಂದಾಗಿ ನಾಪೋಕ್ಲು ವಿಭಾಗದ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಬೀರಿದೆ.
ಉರಿ ಬಿಸಿಲಿನ ತಾಪದಿಂದ ಮಳೆಗಾಗಿ ಕಾದು ಕುಳಿತ ಜನರು ಸಂತೋಷಗೊಂಡಿದ್ದಾರೆ. ಬೆಳೆಗಾರರು ಈ ಸಮಯದಲ್ಲಿ ಕಾಫಿ ಮತ್ತು ಕರಿಮೆಣಸು ಕೊಯ್ಲು ಕಾರ್ಯ ಮುಗಿಸಿ ಉತ್ತಮ ಮಳೆಯಿಂದ ಮುಂದಿನ ಫಸಲನ್ನು ಪಡೆಯಲು ಸಾಧ್ಯವಾಗುತ್ತದೆ. ಮಳೆಯಾಗದಿದ್ದರೆ ಕೃತಕ ಮಳೆ (ಸ್ಟ್ರಿಂಕ್ಲರ್ಸ್) ಮೊರೆ ಹೋಗಬೇಕಿದ್ದು, ಇದರಿಂದ ಬೆಳೆಗಾರ ನಷ್ಟ ಅನುಭವಿಸಬೇಕಾಗುತ್ತದೆ. ವಿಭಾಗದಲ್ಲಿ ಶೇ.80ರಷ್ಟು ಬೆಳೆಗಾರರು ಕಾಫಿ ಕೊಯ್ಲು ಕಾರ್ಯ ಮುಗಿಸಿದ್ದು, ಮಳೆಯಿಂದಾಗಿ ಬೆಳೆಗಾರರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ.
ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಈ ಭಾಗದಲ್ಲಿ ನೀರಿನ ಅಭಾವ ಉಂಟಾಗಿದ್ದು, ಕೆಲವು ದಿನಗಳ ಹಿಂದೆ ಕಾಡುಗಳಲ್ಲಿ ಬೆಂಕಿ ಅವಘಡಗಳು ಸಹ ನಡೆದಿರುವುದನ್ನು ಸ್ಮರಿಸಬಹುದು.
ವರದಿ :ಝಕರಿಯ ನಾಪೋಕ್ಲು