ವಿರಾಜಪೇಟೆ ಮಾ.14 : ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ವಿರಾಜಪೇಟೆ ತಾಲೂಕಿನ ಬೆಳ್ಳುಮಾಡು ಕುಂಜಿಗೇರಿ ಗ್ರಾಮದ ದೇವರ ಕಾಡಿನಲ್ಲಿ ನೆಲೆ ನಿಂತಿರುವ ಆಡುಕೋಣಿ ಶ್ರೀ ಶಾಸ್ತಾವು (ಈಶ್ವರ) ಮತ್ತು ಶ್ರೀ ವಿಷ್ಣುಮೂರ್ತಿ ದೇವರು ಪುನರ್ ಪ್ರತಿಷ್ಠಾಪನೆಗೊಂಡು ಲೋಕಾರ್ಪಣೆ ಗೊಳಿಸಲಾಯಿತು.
ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪ್ರಜ್ವಲ್ ಕುದ್ದಣ್ಣಯ್ಯ ನೇತೃತ್ವದಲ್ಲಿ ಪ್ರಭಾಕರ ಕುದ್ದಣ್ಣಯ, ಪ್ರಾಣಮ್ ಕುದ್ದಣ್ಣಯ ಮತ್ತು ವೆಂಕಟರಮಣ ಭಟ್ ಹಾಗೂ ದೇವಾಲಯದ ವಾಸ್ತುಶಿಲ್ಪಿ ಜಗನ್ನಿವಾಸ್ ರಾವ್ ಸಾನಿಧ್ಯದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಿತು.
ಮಾ.11 ರಂದು ಸಾಮೂಹಿಕ ಪಾರ್ಥನೆ, ಆಚಾರ್ಯವರ್ಣ, ಆಲಯ ಪರಿಗ್ರಹ, ಬಿಂಬ ಪರಿಗ್ರಹ, ಸ್ವಸ್ತಿ ಪುಣ್ಯಾಹ ವಾಚನ, ಖನನಾದಿ ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ಕಲಶ ಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ ನೂತನ ಬಿಂಬ ಜಲಾಧಿವಾಸ, ವಾಸ್ತು ಕಲಶಾಭಿಷೇಕ ನೆರವೇರಿತು.
ಮಾ.12 ರಂದು ಮಾಹಾಗಣಪತಿ ಹೋಮ, ಪ್ರಾಯಶ್ಚಿತ ಹೋಮ, ಶಯ್ಯಾ ಮಂಟಪ ಪೂಜೆ, ಅನುಜ್ಞಾ ಕಲಶಾಭಿಷೇಕ, ಜೀವೋದ್ವಾಸನ ಕ್ರಿಯೆ ನಡೆಯಿತು.
ಇಂದು ಮಾಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಶಯ್ಯ ಪೂಜೆ, ಶ್ರೀ ಶಾಸ್ತಾವು ಲಿಂಗಧಾರಿಯಾದ (ಈಶ್ವರ) ದೇವರು ಮತ್ತು ವಿಷ್ಣುಮೂರ್ತಿ ದೇವರುಗಳ ಪ್ರತಿಷ್ಠೆಗಳು ನಡೆದವು. ಪ್ರತಿಷ್ಠಾಪನೆ ದಿವಸದ ಅಂಗವಾಗಿ ಗೋ ದರ್ಶನ, ಅಷ್ಟಬಂದ ಕ್ರಿಯೆ, 101 ಕಳಶಗಳಿಂದ ಜೀವ ಕಲಶಾಭಿಷೇಕ, ಅಲಂಕೃತ ದೇವರಿಗೆ ಮಾಹಾಪೂಜೆ ನಡೆಯಿತು. ಬಳಿಕ ಕ್ಷೇತ್ರಾನಿಷ್ಠಾನ ಪದ್ಧತಿ ನಿರ್ಣಯ, ವೈದಿಕ ಮಂತ್ರಾಕ್ಷತ, ಪ್ರಸಾದ ವಿನಿಯೋಗ ನಡೆಯಿತು.
ನೆರೆದಿದ್ದ ಭಕ್ತಾಧಿಗಲಿಗೆ ಅನ್ನದಾನ ನೆರವೇರಿತು. ದೇವಾಲಯದ ಟ್ರಷ್ಟಿಗಳು, ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿಯ ಸದಸ್ಯರು, ಪುರೋಹಿತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ