ವಿರಾಜಪೇಟೆ ಮಾ.15 : ಮೀನುಪೇಟೆ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದ 79ನೇ ವಾರ್ಷಿಕ ತೆರೆ ಮಹೋತ್ಸವವು ಮಾ.21, 22 ಹಾಗೂ 23ರಂದು ನಡೆಯಲಿದೆ.
ದೇವಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯದೊಂದಿಗೆ ಜರುಗಲಿದೆ ಎಂದು ದೇವಾಲಯದ ಉತ್ಸವ ಆಚರಣಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಮಾ.21 ರಂದು ಪ್ರಾತ:ಕಾಲ ಗಣಪತಿ ಹೋಮ ನಡೆಯಲಿದ್ದು, ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಸಂಜೆ 6 ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ ರಾತ್ರಿ 8 ಕ್ಕೆ ಅನ್ನಸಂತರ್ಪಣೆ, 9 ಗಂಟೆಗೆ ಮಯವಿಲ್ ಮನೋರಮ ಟಿವಿ ಚ್ಯಾನಲ್ ಉಗ್ರಂ ಉಜ್ವಲಂ ತಂಡದಿಂದ ಸ್ಟೇಜ್ ಶೋ ನಡೆಯಲಿದೆ.
ಮಾ. 22 ರಂದು ಸಂಜೆ 5 ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ, 5-30 ಕ್ಕೆ ಮೊದಕಲಶದೋಂದಿಗೆ ತಾಲಪ್ಪೊಲಿ ಮೆರವಣಿಗೆ ನಡೆಯಲಿದೆ. ಸಿಂಗಾರಿ ಮೇಳಂ, ದೀಪದೋಂದಿಗೆ ನೃತ್ಯ ಕಾರ್ಯಕ್ರಮ ಹಾಗೂ ಚೆಂಡೆ ಮೇಳದೊಂದಿಗೆ ಮಹಿಳೆಯರ ತಾಲಪ್ಪೊಲಿ ಸಾತ್ ನೀಡಲಿದ್ದಾರೆ.
ಮೆರವಣಿಗೆಯು ನಗರದ ತೆಲುಗರ ಬೀದಿಯಿಂದ ಹೊರಟು ಮುಖ್ಯ ಬೀದಿಗಳಲ್ಲಿ ಸಂಚರಿಸಿ ದೇವಾಲಯಕ್ಕೆ ಆಗಮಿಸಲಿದೆ. ಸಂಜೆ 6 ಗಂಟೆಯಿಂದ ಕುಟ್ಟಿಚಾತನ್, ಗುಳಿಗನ್, ವಸೂರಿಮಾಲ, ಪೋದಿ, ವಿಷ್ಣು ಮೂರ್ತಿ ವೆಳ್ಳಾಟಂ ನಡೆಯಲಿದೆ. ನಂತರ ಅನ್ನ ಸಂತರ್ಪಣೆ ಜರುಗಲಿದೆ. ರಾತ್ರಿ ಲಕ್ಕಿ ಡಿಪ್ ಡ್ರಾ ನಡೆಯಲಿದೆ.
ಮಾ.23 ರಂದು ಪ್ರಾತ:ಕಾಲ 1 ಗಂಟೆಗೆ ಶಾಸ್ತಪ್ಪನ್ ಮತ್ತು ಗುಳಿಗನ್ ಕೊಲ, ಪ್ರಾತ:ಕಾಲ 4 ಗಂಟೆಗೆ ತಿರುವಪ್ಪನ್, ಬೆಳಿಗ್ಗೆ 8 ಗಂಟೆಗೆ ಭಗವತಿ, 10 ಗಂಟೆಗೆ ವಸೂರಿಮಾಲ ತೆರೆ, 11 ಗಂಟೆಗೆ ವಿಷ್ಣುಮೂರ್ತಿ ತೆರೆ, 12 ಕ್ಕೆ ಅನ್ನಸಂತರ್ಪಣೆ ನೆರವೇರಲಿದೆ. ಅಪರಾಹ್ನ 3 ಗಂಟೆಗೆ ವಿಷ್ಣುಮೂರ್ತಿ ವಾರಣದೊಂದಿಗೆ ವಾರ್ಷಿಕ ತೆರೆ ಮಹೋತ್ಸವ ಮುಕ್ತಾಯವಾಗಲಿದೆ.
ದೇಗುಲದಲ್ಲಿ ಆಚರಿಸಲಾಗುವ ವಾರ್ಷಿಕ ತೆರೆ ಮಹೋತ್ಸವಕ್ಕೆ ನಾಡಿನ ಸರ್ವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ.