ಮಡಿಕೇರಿ ಮಾ.15 : ಅಂತರ್ಜಾತಿ ವಿವಾಹವಾಗಿದ್ದ ಯುವತಿಯೊಬ್ಬಳು ಪತಿಯ ಮನೆ ಸೇರಿದ ನಾಲ್ಕೇ ದಿನದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಘಟನೆ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮದಲ್ಲಿ ನಡೆದಿದೆ.
ಹೆಬ್ಬಾಲೆ 6ನೇ ಹೊಸಕೋಟೆ ಗ್ರಾಮದ ನಿವಾಸಿ ರಾಜು ಹಾಗೂ ವನಜಾಕ್ಷಿ ದಂಪತಿ ಪುತ್ರಿ, ಕುಶಾಲನಗರ ಕಾಲೇಜೊಂದರ ವಿದ್ಯಾರ್ಥಿನಿ ಅಕ್ಷಿತ(18) ಎಂಬಾಕೆಯೇ ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಈ ಘಟನೆ ಕುರಿತು ಸಂಶಯ ವ್ಯಕ್ತಪಡಿಸಿರುವ ಮೃತ ಯುವತಿಯ ಪೋಷಕರು ಕೊಲೆ ಆರೋಪದ ದೂರು ನೀಡಿದ್ದಾರೆ.
ಮಾ.10 ರಂದು ಬ್ಯಾಂಕ್ ಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ ಅಕ್ಷಿತ ಮಧ್ಯಾಹ್ನದ ವೇಳೆಗೆ ಅಂತರ್ಜಾತಿ ವಿವಾಹವಾಗಿ ಅದೇ ಗ್ರಾಮದ ಹೇಮಂತ್ ನ ಮನೆ ಸೇರಿದ್ದಳು ಎಂದು ಹೇಳಲಾಗಿದೆ.
ಮಾ.14 ರಂದು ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತ್ತಾದರು ಜೀವ ಉಳಿಯಲಿಲ್ಲ. ಈ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.










