ಮಡಿಕೇರಿ ಮಾ.16 : ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದ ಕಾವೇರಿ ಹಾಲ್ ನಲ್ಲಿ 9 ಮುಸ್ಲಿಂ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಲ್-ಅಮೀನ್ ಸಮಿತಿಯ ಮಹಾಪೋಷಕ ಹಾಗೂ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್, ಅಲ್ -ಅಮೀನ್ ಸಮಿತಿಯು ಬಡ,ಅನಾಥರಾಗಿರುವ 445ಕ್ಕೂ ಅಧಿಕ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ.
ಇದರಲ್ಲಿ 430 ಕ್ಕೂ ಅಧಿಕ ಸಂಖ್ಯೆಯಲ್ಲಿ ಕೊಡಗು ಜಿಲ್ಲೆಯ ಬಡಕುಟುಂಬದ ಹೆಣ್ಣು ಮಕ್ಕಳಾಗಿದ್ದಾರೆ.
ಕಳೆದ ಎರಡು ದಶಕಗಳಿಂದ ಅಲ್-ಅಮೀನ್ ಸಮಿತಿಯು ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ರಮವನ್ನು ನಡೆಸುವುದರ ಮೂಲಕ, ಬಡ ಕುಟುಂಬಗಳ ಕಣ್ಣೀರೊರೆಸುವ ಕೆಲಸವನ್ನು ಮಾಡುತ್ತಾ ಬಂದಿದೆ.
ಈ ವರ್ಷ 9 ಬಡ ಹೆಣ್ಣುಮಕ್ಕಳ ವಿವಾಹವನ್ನು ಯಶಸ್ವಿಯಾಗಿ ನಡೆಸಿ ಕೊಡಲಾಗಿದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಹಾಗೂ ಕುಶಾಲನಗರ ದಾರುಲ್ ಹುದಾ ಮದರಸ ಪ್ರಾಂಶುಪಾಲ ತಮ್ಲೀಖ್ ದಾರಿಮಿ ಮುಖ್ಯ ಭಾಷಣ ಮಾಡಿ, ಹೊಸ ಕನಸುಗಳೊಂದಿಗೆ ನವ ವಧು-ವರರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿಯವರು ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.
ಕಡು ಬಡತನದಲ್ಲಿ ಜೀವನ ನಡೆಸುತ್ತಿರುವ ಜಿಲ್ಲೆಯ ಹೆಣ್ಣುಮಕ್ಕಳ ವಿವಾಹವನ್ನು ಕಳೆದ ಎರಡು ದಶಕಗಳಿಂದ ಅಲ್-ಅಮೀನ್ ಸಮಿತಿಯವರು ನೆರವೇರಿಸಿಕೊಟ್ಟಿದ್ದಾರೆ. ಬಡತನದಲ್ಲಿ ಜೀವನ ಸಾಗಿಸುತ್ತಿರುವ
ಪೋಷಕರು ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಡಲು ಕಷ್ಟಪಡುವುದನ್ನು ಕಂಡು, ಕೊಡಗು ಜಿಲ್ಲೆಯಲ್ಲಿ ಅಲ್-ಅಮೀನ್ ಸಮಿತಿಯವರು ಬಡ ಕುಟುಂಬದ ಹೆಣ್ಣುಮಕ್ಕಳ ದಾಂಪತ್ಯ ಜೀವನ ನಡೆಸಲು ದಾರಿ ಮಾಡಿಕೊಟ್ಟಿದ್ದಾರೆ.
ಇವರ ಸೇವಕಾರ್ಯಕ್ಕೆ ಇಡೀ ಜಿಲ್ಲೆಯ ಜನರು ಕೈಜೋಡಿಸಬೇಕಾಗಿದೆ ಎಂದು ತಮ್ಲೀಖ್ ದಾರಿಮಿ ಹೇಳಿದರು.
ಕೊಡಗು ಜಿಲ್ಲೆಯ ನಾಯಿಬ್ ಖಾಝಿಗಳಾದ ಎಂ.ಎಂ ಅಬ್ದಲ್ಲಾ ಫೈಜಿ ಎಡಪಲಾ ಹಾಗೂ ಶಾದುಲಿ ಫೈಝಿ ಕೊಂಡಂಗೇರಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ವಧು-ವರರಿಗೆ ಶುಭ ಕೋರಿದರು.
ಸಯ್ಯದ್ ಅಲ್ ಹೈದ್ರೋಸಿ ಶರ್ಫುದ್ದೀನ್ ತಂಙಲ್ ವೇಣೂರು ಪ್ರಾರ್ಥನೆ ನೆರವೇರಿಸಿ, ನಿಖ್ಹಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಅಲ್-ಅಮೀನ್ ಸಮಿತಿಯ ಅಧ್ಯಕ್ಷ ಬಿ.ಎಚ್ ಅಹಮದ್,ಅಲ್-ಅಮೀನ್ ಮಾಜಿ ಅಧ್ಯಕ್ಷ ಬಿ.ಎಚ್ ಮುಹಮ್ಮದ್, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಮೀನ್ ಮೊಹಸ್ಸೀನ್ , ಬಾಪೂ ಹಾಜಿ ಕೊಡಗರಹಳ್ಳಿ,ಉಸ್ಮಾನ್ ಫೈಝಿ, ಎಂ.ಎಂ ಮಸೀದಿ ಖತೀಬರಾದ ಹಮೀದ್ ಮದನಿ, ಸಯ್ಯದ್ ಖಾತಿಮ್ ತಂಙಲ್,ಶಂಶುಲ್ ಉಲಮಾ ಟ್ರಸ್ಟ್ ಅಧ್ಯಕ್ಷ ಬಶೀರ್ ಹಾಜಿ, ಇದ್ದರು.
ಕಾರ್ಯಕ್ರಮವನ್ನು ಅಲ್ -ಅಮೀನ್ ಕೊಡಗು ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಎಂ.ಇ ಮೊಹಮ್ಮದ್ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಎ.ಇ ಮೊಹಿದೀನ್ ಸ್ವಾಗತಿಸಿ, ವಂದಿಸಿದರು.