ನಾಪೋಕ್ಲು ಮಾ.16 : ವಿಶ್ವಕ್ಕೆ ವಿಶಿಷ್ಟ ಸಂಸ್ಕೃತಿಯನ್ನು ಪರಿಚಯಿಸಿದ ಕೊಡಗಿನಲ್ಲಿ
ಮತ್ತೆ ಹಾಕಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಮಾ.18ರಿಂದ ಆರಂಭಗೊಳ್ಳುವ 23ನೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ದಾಖಲೆಯ 336 ಕೊಡವ ಕುಟುಂಬಗಳು ಪಾಲ್ಗೊಳ್ಳಲಿದ್ದು, ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಕಿ ಪಂದ್ಯಾವಳಿಯ ಉದ್ಘಾಟನೆಗೆ ಆಗಮಿಸಲಿದ್ದು ಮತ್ತಷ್ಟು ಮೆರುಗು ಹೆಚ್ಚಲಿದೆ. ಸಮೀಪದ ಬಲ್ಲಮಾವಟಿಯ ಅಪ್ಪಚೆಟ್ಟೋಳಂಡ ಕುಟುಂಬ ಕೌಟುಂಬಿಕ ಹಾಕಿ ಆತಿಥ್ಯ ವಹಿಸಿದ್ದು, ಯಶಸ್ಸಿಗೆ ಹಗಲಿರುಳು ಶ್ರಮಿಸುತ್ತಿದೆ.
ಕೌಟುಂಬಿಕ ಕೊಡವ ಹಾಕಿ ಪಂದ್ಯಾವಳಿಯ ಯಶಸ್ಸಿಗೆ ಕುಟುಂಬಸ್ಥರು ಶ್ರಮಿಸುತ್ತಿದ್ದು, ಒಂದು ತಿಂಗಳಿನಿಂದ ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸಿದ್ಧತೆ ನಡೆಯುತ್ತಿದೆ.
ಕೊಡಗಿನ ಹಾಕಿ ಪ್ರಿಯರು ವೀಕ್ಷಿಸಲು ಎಲ್ಲ ಸೌಲಭ್ಯಗಳನ್ನು ಒಳಗೊಂಡ 32 ಲಕ್ಷ ರೂ.ವೆಚ್ಚದ ಬೃಹತ್ ಗ್ಯಾಲರಿ ನಿರ್ಮಾಣ ಮಾಡಲಾಗುತ್ತಿದೆ. 25000 ಜನರು ಒಟ್ಟಾಗಿ ಪಂದ್ಯ ವೀಕ್ಷಿಸಬಹುದಾಗಿದೆ. ಅಲ್ಲದೆ 600 ಮಂದಿ ಕುಳಿತುಕೊಳ್ಳಲು ವಿಐಪಿ ಗ್ಯಾಲರಿಯನ್ನು ನಿರ್ಮಾಣ ಮಾಡಲಾಗಿದ್ದು, ಮೈದಾನ ಹಾಗೂ ಗ್ಯಾಲರಿ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಒಂದೇ ಮೈದಾನದಲ್ಲಿ ಒಟ್ಟು ಮೂರು ಸುಸಜ್ಜಿತ ಹಾಕಿ ಮೈದಾನ ತಯಾರಾಗಿದ್ದು ಒಂದು ತಿಂಗಳ ಕಾಲ ನಡೆಯುವ ಈ ಹಾಕಿ ಉತ್ಸವದಲ್ಲಿ ಹಾಕಿ ಪ್ರಿಯರು ಪಾಲ್ಗೊಂಡು ಸಂಭ್ರಮಿಸಲಿದ್ದಾರೆ.
ಪಾಂಡಂಡ ಕುಟ್ಟಪ್ಪ : ಕಾಶಿ ಸಹೋದರರ ಪರಿಕಲ್ಪನೆಯಲ್ಲಿ ಕೊಡವ ಹಾಕಿ ಸಂಸ್ಥೆ ಮೂಲಕ ಪ್ರತಿವರ್ಷ ಒಂದೊಂದು ಕೊಡವ ಕುಟುಂಬದ ನೇತೃತ್ವದಲ್ಲಿ ಹಾಕಿ ಉತ್ಸವ ಆಯೋಜಿಸಲಾಗುತ್ತಿದೆ. ಪ್ರಾಕೃತಿಕ ವಿಕೋಪ, ಕೋವಿಡ್ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳಿಂದ ಸ್ದಗಿತಗೊಂಡಿದ್ದ ಹಾಕಿ ಉತ್ಸವಕ್ಕೆ ಈ ವರ್ಷ ಚಾಲನೆ ಸಿಗಲಿದೆ. 336 ತಂಡ ಪಾಲ್ಗೊಳ್ಳುತ್ತಿರುವುದು ಐತಿಹಾಸಿಕ ದಾಖಲೆ. ಈ ಹಿಂದೆ 2018 ರಲ್ಲಿ ನಾಪೋಕ್ಲುವಿನಲ್ಲಿ ಆಯೋಜಿಸಿದ್ದ 22ನೇ ವರ್ಷದ ಹಾಕಿ ನಮ್ಮೆಯಲ್ಲಿ ಕುಲ್ಲೇಟಿರ ಕಪ್ ನಲ್ಲಿ 329 ತಂಡ ಪಾಲ್ಗೊಂಡಿದ್ದವು.
ಅಪ್ಪಚೆಟ್ಟೋಳಂಡ ಹಾಕಿ ಉತ್ಸವಕ್ಕೆ 1.5 0 ಕೋಟಿ ರೂ. ವೆಚ್ಚವಾಗುವ ಅಂದಾಜು ಮಾಡಲಾಗಿದೆ. ರಾಜ್ಯ ಸರ್ಕಾರ ಒಂದು ಕೋಟಿ ರೂ. ಮಂಜೂರು ಮಾಡಿದೆ. ಸನ್ ಪ್ಯೂರ್ ಸಂಸ್ಥೆ ಕೂಡ ಪ್ರಾಯೋಜಕತ್ವ ವಹಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವಿಧ ಸಂಘ ಸಂಸ್ಥೆಗಳು ,ದಾನಿಗಳು ಆರ್ಥಿಕ ನೆರವು ನೀಡಿದ್ದಾರೆ. ಅಪ್ಪಚೆಟ್ಟೋಳಂಡ ಕುಟುಂಬದಿಂದ ಹಣ ಸಂಗ್ರಹಿಸಲಾಗಿದೆ.
ಅಭಿಪ್ರಾಯ : ಕುಟುಂಬದ ಸದಸ್ಯರು ಪ್ರತಿ ದಿನ ಸಭೆ ಸೇರಿ ಉತ್ಸವದ ಯಶಸ್ಸಿಗೆ ಕಾರ್ಯಯೋಜನೆ ರೂಪಿಸುತ್ತಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಂದು ಮುಖ್ಯಮಂತ್ರಿಗಳು ಆಗಮಿಸುವ ಹಿನ್ನೆಲೆಯಲ್ಲಿ ಉತ್ಸವಕ್ಕೆ ವಿಶೇಷ ಕಳೆ ಬಂದಿದೆ ಎಂದು ಹಾಕಿ ಹಬ್ಬದ ಕಾರ್ಯದರ್ಶಿ ಮಿಥುನ್ ಮಾಚಯ್ಯ ಹೇಳಿದರು.
ಹಾಕಿ ನಮ್ಮೆಯ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ ಈ ಬಾರಿಯ ಹಾಕಿ ಉತ್ಸವಕ್ಕೆ 336 ತಂಡಗಳು ನೋಂದಾಯಿಸಿಕೊಂಡಿವೆ. ಇದು ದಾಖಲೆ. ಗ್ಯಾಲರಿ ಕೆಲಸ ಪೂರ್ಣಗೊಳ್ಳುವ ಹಂತದಲ್ಲಿದೆ. ಪ್ರೇಕ್ಷಕರ ಗ್ಯಾಲರಿ ವಿಐಪಿ ಗ್ಯಾಲರಿ ನಿರ್ಮಾಣಗೊಂಡಿದೆ. ಒಂದು ತಿಂಗಳಿನಿಂದ ಮೈದಾನ ಸಮತಟ್ಟು ಮಾಡುವ ಕೆಲಸ ನಡೆದಿದ್ದು ಜನರಲ್ ತಿಮ್ಮಯ್ಯ ಕ್ರೀಡಾಂಗಣದ
3 ಮೈದಾನಗಳನ್ನು ಏಕಕಾಲಕ್ಕೆ ಬಳಸಿಕೊಳ್ಳಲಾಗುವುದು. ದಿನಕ್ಕೆ 21 ಪಂದ್ಯಗಳು ನಡೆಯಲಿವೆ. ಪ್ರತಿದಿನ 42 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಳ್ಳಲಿವೆ. ಮೈದಾನದ ಹೊರಗಡೆ 40 ಮಳಿಗೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರತಿದಿನ 5,000 ದಿಂದ 10,000 ಪ್ರೇಕ್ಷಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಫೈನಲ್ ಪಂದ್ಯಕ್ಕೆ 25,000 ಪ್ರೇಕ್ಷಕರ ನಿರೀಕ್ಷೆ ಇರಿಸಿಕೊಂಡು ಗ್ಯಾಲರಿ ನಿರ್ಮಿಸಲಾಗಿದೆ ಎಂದರು.
ನಾಲ್ಕು ವರ್ಷದ ನಂತರ ಹಾಕಿ ಉತ್ಸವ ಆಯೋಜನೆಗೊಳ್ಳುತ್ತಿದೆ, ಉತ್ಸವಕ್ಕೆ ಮೆರುಗು ತರುವ ಉದ್ದೇಶದಿಂದ ಮಾರ್ಚ್ 18ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದಲ್ಲಿ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ ಪಟ್ಟಣದ ಪೊನ್ನಮ್ಮ ಕಾವೇರಪ್ಪ ಕಾಂಪ್ಲೆಕ್ಸ್ ನಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಯಲಿದೆ. ಮೈಸೂರು ಸೇರಿದಂತೆ ಎಂಟು ಜಿಲ್ಲೆಗಳ ವಿವಿಧ ಕಲಾತಂಡಗಳು ಪಾಲ್ಗೊಳ್ಳಲಿವೆ. ಕುಟುಂಬದ ಸದಸ್ಯರು ಕೊಡವ ಸಾಂಪ್ರದಾಯಿಕ ಉಡುಪಿಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೊಡಗಿನ ಸಂಸ್ಕೃತಿಯನ್ನು ಬಿಂಬಿಸುವ ವಿಶೇಷತೆಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುವುದು ಮೆರವಣಿಗೆ ಉದ್ಘಾಟನೆಗೂ ಮುನ್ನ 23 ಗುಂಡುಗಳನ್ನು ಹಾರಿಸುವ ಮೂಲಕ 23ನೇ ವರ್ಷದ ಕೌಟುಂಬಿಕ ಹಾಕಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಚೆರಿಯ ಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ ತೆರಳುವ ರಸ್ತೆಯನ್ನು ಮರುಡಾಮರೀಕರಣ ಮಾಡಲಾಗುತ್ತಿದ್ದು ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.”
ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ
ಅಧ್ಯಕ್ಷರು
ಅಪ್ಪಚೆಟ್ಟೋಳಂಡ ಹಾಕಿ ಉತ್ಸವ
ಮಹಿಳಾ ಸದಸ್ಯೆ ಅಪ್ಪಚೆಟ್ಟೋಳಂಡ ಶಾಂತಿ ಭೀಮಯ್ಯ ಮಾತನಾಡಿ ಮಹಿಳಾ ಸದಸ್ಯರು ವಿವಿಧ ಸಮಿತಿ ಸದಸ್ಯರು ಒಗ್ಗೂಡಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಹಾಕಿನಮ್ಮೆಯ ತಯಾರಿ ಸುಸೂತ್ರವಾಗಿ ನಡೆದಿದೆ ಎಂದರು.
ಶನಿವಾರ ವಿವಿಧ ಸಮಿತಿಗಳ ಸಭೆನಡೆದಿದ್ದು, ಹಾಕಿ ನಮ್ಮೆಯ ಉಪಾಧ್ಯಕ್ಷ ರಾಜಾ ಭೀಮಯ್ಯ, ಜಂಟಿಕಾರ್ಯದರ್ಶಿ ವಿನಯ್ ಅಪ್ಪಯ್ಯ, ಮೈದಾನ ಸಮಿತಿಯ ಅಧ್ಯಕ್ಷ ಪಿ.ಕೆ.ಬೋಪಯ್ಯ, ಖಜಾಂಚಿ ಎ.ಪಿ.ವಸಂತ ಮುತ್ತಪ್ಪ, ಎ.ಕೆ.ಬೋಪಯ್ಯ, ಎ.ಬಿ.ಅಪ್ಪಯ್ಯ, ಜನತ್ ಕುಮಾರ್, ಮನುಸುರೇಶ್, ರೀನಾ, ರೀಟಾ, ಎ.ಕೆ.ಅನಿತ, ಶಶಿ, ನಯನ, ಅಪ್ಪಯ್ಯ, ಸೀಮಾಸುರೇಶ್ ಉಪಸ್ಥಿತರಿದ್ದು, ಪ್ರಗತಿ ಪರಿಶೀಲಿಸಿದರು.
ವರದಿ : ದುಗ್ಗಳ ಸದಾನಂದ.