ಮಡಿಕೇರಿ ಮಾ.19 : ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡನೇ ವಾರ್ಡಿನ ನಿವಾಸಿಗಳು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಶೀಘ್ರ ರಸ್ತೆಯನ್ನು ಅಭಿವೃದ್ಧಿ ಪಡಿಸದಿದ್ದಲ್ಲಿ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವಾರ್ಡ್ನಲ್ಲಿ 25 ಕ್ಕೂ ಅಧಿಕ ಮನೆಗಳಿದ್ದು, 150 ಮತದಾರರು ಇದ್ದಾರೆ. ಹೊಂಡ, ಗುಂಡಿಗಳ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಕಷ್ಟ ಪಡಬೇಕಾಗಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು ಮೂರು ಕಿ.ಮೀ ದೂರ ಕಷ್ಟಪಟ್ಟು ನಡೆದುಕೊಂಡೇ ಹೋಗಬೇಕಾಗಿದೆ. ವಿನಾಕಾರಣ ರಸ್ತೆ ದುರಸ್ತಿ ಪಡಿಸದೆ ನಿರ್ಲಕ್ಷಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದರು.
ಪ್ರತಿಭಟನೆ ಮೂಲಕ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದೇವೆ ಎಂದು ಗ್ರಾಮಸ್ಥರಾದ ಸೌಮ್ಯ ಹಾಗೂ ಅವಿನಾಶ್ ಅಸಮಾಧಾನ ವ್ಯಕ್ತಪಡಿಸಿದರು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಸಿ.ಜಗನ್ನಾಥ್ ಮಾತನಾಡಿ ಈಗಾಗಲೇ ರೂ.5 ಲಕ್ಷ ಅನುದಾನ ಬಿಡುಗಡೆಯಾಗಿದೆ. ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ 2ಲಕ್ಷ ರೂ. ನೀಡಲಾಗುತ್ತದೆ. ಸೋಮವಾರ ಗ್ರಾಮಸ್ಥರ ನಿಯೋಗದೊಂದಿಗೆ ಕುಶಾಲನಗರದಲ್ಲಿರುವ ಕಾವೇರಿ ನೀರಾವರಿ ನಿಗಮದ ಕಛೇರಿಗೆ ತೆರಳಿ ವಸ್ತುಸ್ಥಿತಿಯ ಬಗ್ಗೆ ತಿಳುವಳಿಕೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಜಿ.ರಮೇಶ್ ರೈ, ಗ್ರಾ.ಪಂ ಸದಸ್ಯೆ ಅರುಣ ಕುಮಾರಿ, ಪ್ರಕಾಶ್, ತಾ.ಪಂ ಮಾಜಿ ಉಪಾಧ್ಯಕ್ಷ ಶಂಕರ ನಾರಾಯಣ ಮತ್ತಿತರರು ಇದ್ದರು.










