ಮಡಿಕೇರಿ ಮಾ.20 : ಅಹ್ಮದಿಯಾ ಮುಸ್ಲಿಮ್ ಜಮಾಅತ್ ನ ಯುವ ವಿಭಾಗವಾದ ಮಜ್ಲಿಸ್ ಖುದ್ದಾಮುಲ್ ಅಹ್ಮದಿಯಾ ವತಿಯಿಂದ ಕರ್ನಾಟಕದಾದ್ಯಂತ ನಡೆಯುತ್ತಿರುವ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಮಡಿಕೇರಿಯ ಸಂಪಿಗೆ ಕಟ್ಟೆಯಿಂದ ರಾಜೇಶ್ವರಿ ಶಾಲೆಯವರೆಗೆ ಸ್ವಚ್ಛತಾ ಕಾರ್ಯ ನಡೆಯಿತು.
ಯುವ ಅಧ್ಯಕ್ಷ ಹದ್ಸರ್ ಅಹ್ಮದ್ ನೇತೃತ್ವದಲ್ಲಿ ಯುವ ವಿಭಾಗದ ಸದಸ್ಯರು ಹಾಗೂ ಪದಾಧಿಕಾರಿಗಳು ರಸ್ತೆ ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಸೇರಿದಂತೆ ಇತ್ಯಾದಿ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿ ಸಂಗ್ರಹಿಸಿದ ಕಸವನ್ನು ನಗರಸಭಾ ಸದಸ್ಯರಾದ ಮನ್ಸೂರ್ ಅವರ ಸಮ್ಮುಖದಲ್ಲಿ ನಗರ ಸಭಾ ವಾಹನಕ್ಕೆ ನೀಡಲಾಯಿತು.
ಈ ಸಂದರ್ಭ ಅಹ್ಮದಿಯಾ ಮುಸ್ಲಿಮ್ ಜಮಾಅತಿನ ಅಧ್ಯಕ್ಷ ಜಿ.ಎಂ.ಮೊಹಮ್ಮದ್ ಶರೀಫ್, ಖಾಲಿದ್ ಹಾಗೂ ಯುವ ವಿಭಾಗದ ಇತರ ಪದಾಧಿಕಾರಿಗಳು ಹಾಜರಿದ್ದರು.









