ಮಡಿಕೇರಿ ಮಾ.20 : ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ)ಯು ನಿರ್ಗತಿಕರ ಉನ್ನತಿಗೆ ಸಹಕಾರಿಯಾಗಲಿದ್ದು, ಇದು ಸಮಾನತೆ, ಪಾರದರ್ಶಕತೆ ಮತ್ತು ಸಮಾಜದಲ್ಲಿ ಉನ್ನತ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಎನ್‍ಸಿಸಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಏರ್ ಕಮೊಡರ್ ಬಿ.ಎಸ್.ಕನ್ವರ್ (ವಿಶಿಷ್ಟ ಸೇವಾ ಪದಕ ವಿಜೇತರು) ಅಭಿಪ್ರಾಯಪಟ್ಟಿದ್ದಾರೆ.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಘಟಕದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಎನ್‍ಸಿಸಿ ಕೆಡೆಟ್‍ಗಳಿಗೆ “ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಯಲ್ಲಿ ಎನ್‍ಸಿಸಿಯ ಅಗತ್ಯತೆ”ಗಳ ಕುರಿತು ನಡೆದ ರಾಜ್ಯಮಟ್ಟದ ಕಾರ್ಯಾಗಾರ ಮತ್ತು ಸಮಾಲೋಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಶಿಕ್ಷಣದಲ್ಲಿ ಭಾರತೀಯತೆಯನ್ನು ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ತರವಾದ ನೀತಿ ಇದಾಗಿದ್ದು, ವಿದ್ಯಾರ್ಥಿಗಳಲ್ಲಿ ಗುಣಾತ್ಮಕತೆ ಹಾಗೂ ರಾಷ್ಟ್ರೀಯತೆಯನ್ನು ಬೆಳೆಸುವ ನಿರ್ದಿಷ್ಟ ಗುರಿಯನ್ನು ಹೊಂದಿದೆ. ಕೋವಿಡ್ ಜಾಗೃತಿ, ಲಸಿಕೆ, ಆಸ್ಪತ್ರೆ, ಸ್ವಸ್ಥ ಅಭಿಯಾನದ ಮೂಲಕ ನೀರಿನ ಸ್ವಚ್ಛತೆ, ಪ್ಲಾಸ್ಟಿಕ್ ಮರುಬಳಕೆಯಂತಹ ಜಾಗೃತಿ ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಇದು ಕ್ರೀಯಾತ್ಮಕ ಚಿಂತನೆಯನ್ನು ಬೆಳೆಸುತ್ತದೆ. ಕಲಿಕೆ ಕೇವಲ ಉದ್ಯೋಗ ಮತ್ತು ಹಣ ಸಂಪಾದನೆಗೆ ಸೀಮಿತವಾಗಿರದೆ, ಕೌಶಲ್ಯವನ್ನು ಒಡಮೂಡಿಸುವ ಕಾರ್ಯ ಯೋಜನೆಯನ್ನು ಹೊಸ ಶಿಕ್ಷಣ ನೀತಿ ಹೊಂದಿದೆ ಎಂದರು
ಭಾರತೀಯ ತತ್ವ ಶಾಸ್ತ್ರ ‘ಕರ್ಮ’ ಎಂಬುದರ ಮೇಲೆ ನಂಬಿಕೆ ಇಟ್ಟಿದೆ. ಕರ್ಮ ನಾವು ಮಾಡುವ ಕಾರ್ಯದಿಂದ ಉಂಟಾಗಲಿದ್ದು, ಅದರ ಪರಿಣಾಮವನ್ನು ನಾವು ಅನುಭವಿಸುತ್ತೇವೆ. ಜೀವನದಲ್ಲಿ ನಾವು ಏನು ಮಾಡುತ್ತೇವೋ ಅದರ ಫಲ ನಮಗೆ ದೊರೆಯುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕೆಟ್ಟ ವಿಚಾರಗಳಿಗೆ ಒಳಗಾಗದೆ ಸದಾ ಒಳ್ಳೆಯದನ್ನೆ ಬಯಸಬೇಕೆಂದು ಬಿ.ಎಸ್.ಕನ್ವರ್ ಕರೆ ನೀಡಿದರು.
ಎನ್‍ಸಿಸಿಯನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿಸ್ತರಿಸುವ ಅಗತ್ಯವಿದೆ. ಇದು ಶಿಸ್ತು, ಸಂಯಮ ಮತ್ತು ನೈತಿಕತೆಯಿಂದ ಸಮಾಜಕ್ಕೆ ಯಾವ ರೀತಿ ಸಹಕಾರಿಯಾಗುತ್ತೀರಿ ಎಂಬುವುದನ್ನು ತಿಳಿಸಿಕೊಡುತ್ತದೆ ಎಂದರು.
ಮಂಗಳೂರು ಗ್ರೂಪ್ ಕಮಾಂಡರ್ ಕರ್ನಲ್ ಎನ್.ಕೆ.ಭಗಸ್ರ (ಸೇನಾ ಪದಕ ವಿಜೇತರು) ಮಾತನಾಡಿ, ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆನ್ನುವುದು ಹೊಸ ಶಿಕ್ಷಣ ನೀತಿಯ ಆಶಯವಾಗಿದೆ. ಶೈಕ್ಷಣಿಕ ವಿಷಯಗಳ ಬಲವರ್ಧನೆಗೆ ಬೇಕಾದ ವಾತಾವರಣವನ್ನು ಈ ನೀತಿಯ ಮೂಲಕ ಸೃಷ್ಟಿಲಾಗುತ್ತಿದೆ. ಇದು ವಿದ್ಯಾರ್ಥಿಗಳ ಪಠ್ಯದ ಜೊತೆಗೆ ತನಗಿಷ್ಟವಾದ ಕೌಶಲ್ಯ ಅಧ್ಯಯನಕ್ಕೂ ಸಹಕಾರಿಯಾಗಲಿದ್ದು, ಪದವಿಯಲ್ಲಿ ಹೇಗೆ ಸಹಕಾರಿಯಾಗಲಿದೆ ಎಂಬುದರ ಬಗ್ಗೆ ತಿಳಿಸಿದರು.
ವಿದ್ಯಾರ್ಥಿಗಳು ಉತ್ತಮ ಜೀವನಕ್ಕಾಗಿ ಸರಳ ಮಾರ್ಗ ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಸಮರ್ಥವಾದುದನ್ನು ಆಯ್ಕೆಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ ಪ್ರಾಸ್ತಾವಿಕ ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಕೊಡಗಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದ್ದು, ಇಲ್ಲಿನ ವಿದ್ಯಾರ್ಥಿಗಳು ರಾಜಕೀಯ, ಕ್ರೀಡೆ, ಸಾಂಸ್ಕøತಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದರು.
ಪ್ರಸ್ತುತ ಹಲವು ವಿದ್ಯಾರ್ಥಿಗಳು ದೇಶ ರಕ್ಷಣೆಯ ಪಡೆಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿರುವುದಲ್ಲದೆ ಅಗ್ನಿಪಥ್, ಅಗ್ನಿವೀರ್ ನಲ್ಲಿ ಸೇರ್ಪಡೆಗೊಂಡು ಸೇನಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 19 ಬೆಟಾಲಿಯನ್ ಎನ್‍ಸಿಸಿ ಕಮಾಂಡಿಂಗ್ ಅಧಿಕಾರಿ ಕರ್ನಲ್ ಜೆಫಿರಿನ್ ಗಿಲ್ಬರ್ಟ್ ಅರಾನ್ಹಾ, ಆಡಳಿತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ವಿ.ಡಿ.ಚಾಕೋ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎನ್‍ಸಿಸಿಯ ಅಗತ್ಯತೆಯ ಕುರಿತು ಸಮಾಲೋಚನೆ ನಡೆಸಿದರು.
ಕಾಲೇಜಿನ ಗ್ರಂಥಪಾಲಕಿ ಡಾ.ವಿಜಯಲತ, ಹಿಂದಿ ವಿಭಾಗದ ಸಹ ಪ್ರಾದ್ಯಪಕ ಡಾ.ಶ್ರೀಧರ್ ಹೆಗಡೆ, ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಸಂಚಾಲಕ ಕೆ.ಎಂ.ಪೂಣಚ್ಚ, ಇಂಗ್ಲಿಷ್ ವಿಭಾಗದ ಡಾ.ನಯನ ಕಷ್ಯಪ್, ವಾಣಿಜ್ಯ ವಿಭಾಗದ ಪ್ರೊ. ಗಾಯತ್ರಿ ದೇವಿ, ಸ್ನಾತಕೋತ್ತರ ಟ್ರಾವಲ್ ಆಂಡ್ ಟೂರಿಸಂ ನ ಸಿ.ಪಿ.ವಿಶಾಲ್, ಹಿಂದಿ ವಿಭಾಗದ ಉಪನ್ಯಾಸಕಿ ಕುರ್ಷಿದ ಬಾನು, ಕೊಡಗು ವಿದ್ಯಾಲಯದ ಎನ್‍ಸಿಸಿ ಅಧಿಕಾರಿ ದಾಮೋಧರ್, ಜನರಲ್ ತಿಮ್ಮಯ್ಯ ಶಾಲೆಯ ಈರಪ್ಪ, ಸರಕಾರಿ ಪ್ರೌಢಶಾಲೆಯ ಕೇರ್‍ಟೆಕರ್ ಚಂದ್ರಿಕಾ, ಸುಬೇದರ್ ರಾಜೀವ್ ಗೌರವ್, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಹಾಗೂ ಕೊಡಗಿನ ಸುಮಾರು 250 ಎನ್‍ಸಿಸಿ ಕೆಡೆಟ್‍ಗಳು ಭಾಗವಹಿಸಿದ್ದರು.
ಎನ್‍ಸಿಸಿ ಕೆಡೆಟ್ ಎಂ.ಜೆ.ಯುಕ್ತಿ ನಿರೂಪಿಸಿದರು, ಪ್ರಾಂಶುಪಲ ಮೇಜರ್ ಡಾ. ಬಿ.ರಾಘವ್ ಸ್ವಾಗತಿಸಿದರು, ಕೆಡೆಟ್ ಬಿ.ಟಿ.ದೀಪ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಗಣ್ಯರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.
ಕೆಡೆಟ್‍ಗಳಾದ ಸಂಜನಾ, ಅಕ್ಷತಾ, ಅಭಿಜ್ಞಾ ಅವರ ನೇತೃತ್ವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.