ಸೋಮವಾರಪೇಟೆ ಮಾ.21 : ಗೋಣಿಕೊಪ್ಪದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವಿರುವ ಪೋಸ್ಟರ್ ಮೇಲೆ ಚಪ್ಪಲಿ ಚಿತ್ರವನ್ನಿಟ್ಟು ಅವಮಾನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದ ಪರಿಶಿಷ್ಠಜಾತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಸೋಮವಾರಪೇಟೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು.
ಈ ಸಂದರ್ಭ ಘಟಕದ ಜಿಲ್ಲಾಧ್ಯಕ್ಷ ಬಿ.ಇ.ಜಯೇಂದ್ರ ಮಾತನಾಡಿ, ಬಿಜೆಪಿ, ಸಂಘ ಪರಿವಾರದ ಕೆಲ ಕಿಡಿಕೇಡಿಗಳ ಮನಸ್ಥಿತಿ ಇಂತಹ ಕೃತ್ಯಗಳಿಂದ ತಿಳಿದು ಬರುತ್ತದೆ. ತಕ್ಷಣವೇ ಆರೋಪಿಗಳನ್ನು ಪತ್ತೆಹಚ್ಚಿ ಮೊಕದ್ದಮೆ ದಾಖಲಿಸಿ, ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಬೇಡಿಕೆಯ ಮನವಿ ಪತ್ರವನ್ನು ತಶೀಲ್ದಾರ್ ಚಂದ್ರಹಾಸ್ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.
ವಿಜಯಸಂಕಲ್ಪ ದಿನದ ಕಾರ್ಯಕ್ರಮದ ಆಯೋಜಕರು, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಿಜೆಪಿ ಸಭೆಯೊಂದರಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ, ಮಸೀದಿಯೊಂದರಲ್ಲಿ ಅಜಾನ್ ಮೊಳಗಿದ ಸಂದರ್ಭ ಅಲ್ಪಸಂಖ್ಯಾತ ಜನಾಂಗದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನುಕ್ರಮ ತೆಗೆದುಕೊಳ್ಳಬೇಕೆಂದುಇದೇ ಸಂದರ್ಭ ಒತ್ತಾಯಿಸಿದರು.
ಕೆ.ಪಿ.ಸಿ.ಸಿ.ಸದಸ್ಯ ಕೆ.ಎ. ಯಾಕೂಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ಜಿಲ್ಲಾ ಇಂಟರ್ಯಾಕ್ಟ್ ಅಧ್ಯಕ್ಷ ಬಿ.ಡಿ. ಅಣ್ಣಯ್ಯ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಬಿ. ಸತೀಶ್, ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ಡಿಸೋಜ, ಪರಿಶಿಷ್ಟ ಜಾತಿ ಘಟಕದ ತಾಲ್ಲೂಕು ಅಧ್ಯಕ್ಷ ಎಚ್.ಬಿ. ರಾಜಪ್ಪ, ನಗರ ಘಟಕದ ಅಧ್ಯಕ್ಷ ಎಚ್.ಎ. ನಾಗರಾಜು ಮತ್ತಿತರರು ಇದ್ದರು.