ಮಡಿಕೇರಿ ಮಾ.21 : ಸಮಾಜವಾದಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ 1999ರ ವಿಧಾನಸಭಾ ಚುನಾವಣೆಯಲ್ಲಿ ಸೋಮವಾರಪೇಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಟಿ.ಕೆ.ಸಾಯಿಕುಮಾರ್ ಅವರು ಇಂದು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳ ಸಮ್ಮುಖದಲ್ಲಿ ಅವರು ಆಮ್ ಆದ್ಮಿ ಧ್ವಜ ಸ್ವೀಕರಿಸಿದರು. ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾಯಿಕುಮಾರ್ ಅವರು ಎರಡು ವರ್ಷಗಳ ಕಾಲ ಸೋಮವಾರಪೇಟೆ ತಾಲ್ಲೂಕಿನ ಯುವ ಜನತಾ ದಳದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ನಂತರ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷರಾಗಿ, ಸಹಕಾರ ಸಂಘಗಳ ಅಧ್ಯಕ್ಷರಾಗಿ ಜನಪರ ಕಾರ್ಯ ಮಾಡಿದ್ದಾರೆ. ಇವರ ಸೇರ್ಪಡೆಯಿಂದ ಆಮ್ ಆದ್ಮಿ ಪಾರ್ಟಿಯ ಕೊಡಗು ಘಟಕ ವಿಧಾನಸಭಾ ಚುನಾವಣೆಗೆ ಮತ್ತಷ್ಟು ಸಧೃಡಗೂಂಡಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸಲು ಸಾಯಿಕುಮಾರ್ ಅವರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ.















