ನಾಪೋಕ್ಲು ಮಾ.22 : ವಾಹನ ಚಾಲಕರು ಮತ್ತು ಮಾಲೀಕರು ತಮ್ಮ ವಾಹನಗಳಿಗೆ ಎಲ್ಲಾ ದಾ ಖಲಾತಿಗಳನ್ನು ಹೊಂದಿರಬೇಕೆಂದು ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹೇಳಿದರು.
ನಾಪೋಕ್ಲು ಠಾಣೆಯಲ್ಲಿ ಕರೆಯಲಾಗಿದ್ದ ಆಟೋ ಚಾಲಕರ ಮತ್ತು ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು ವಾಹನ ಚಲಾಯಿಸುವವರು ಡ್ರೈವಿಂಗ್ ಲೈಸೆನ್ಸ್, ವಾಹನದ ಇನ್ಸೂರೆನ್ಸ್, ಸೇರಿದಂತೆ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು.ಇಲ್ಲದವರು ಒಂದು ವಾರದೊಳಗೆ ದಾಖಲೆಗಳನ್ನು ಸರಿಪಡಿಸಬೇಕು ಇಲ್ಲದಿದ್ದರೆ ಮುಂದೆ ಕಾನೂನು ಕ್ರಮಕ್ಕೆ ಬದ್ಧರಾಗಿರಬೇಕೆಂದು ಎಚ್ಚರಿಕೆ ನೀಡಿದರು.
ನಗರದಲ್ಲಿ ಆಟೋ ನಿಲ್ದಾಣಕ್ಕೆ ಸ್ಥಳಾವಕಾಶ ಕಲ್ಪಿಸಿದ್ದರೂ ಅನಾವಶ್ಯಕವಾಗಿ ಆಟೋರಿಕ್ಷಾಗಳು ನಗರದಲ್ಲಿ ಸುತ್ತಾಡಿ ವಾಹನ ದಟ್ಟಣೆಗೆ ಕಾರಣಕರ್ತರಾಗುತ್ತಿದ್ದು ಅಂತವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದರು.
ನಾಪೋಕ್ಲು ವ್ಯಾಪ್ತಿಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟದ ಬಗ್ಗೆ, ಅಕ್ರಮ ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ, ಅಕ್ರಮ ಚಟುವಟಿಕೆ ಮಾಡುವವರ ಬಗ್ಗೆ ಮಾಹಿತಿ ನೀಡಿ ಉತ್ತಮ ಸಮಾಜಕ್ಕಾಗಿ ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದರು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದೆಂದು ಠಾಣಾಧಿಕಾರಿ ಮಂಜುನಾಥ್ ತಿಳಿಸಿದರು.
ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಮಾತನಾಡಿ ಪಟ್ಟಣದಲ್ಲಿ ಈಗಾಗಲೇ ಆಟೋ ನಿಲ್ದಾಣಕ್ಕೆ 120 ಮೀ,ಸ್ಥಳಾವಕಾಶವನ್ನು ಗ್ರಾ. ಪಂ.ನೀಡಿದ್ದು ಇಲ್ಲಿ ಖಾಸಗಿ ವಾಹನಗಳ ನಿಲುಗಡೆಯಿಂದ ತೊಂದರೆಯಾಗುತ್ತಿದೆ.ಪಟ್ಟಣದಲ್ಲಿ ಬಸ್ಸುಗಳ ಗಂಟೆಗಟ್ಟಲೆ ನಿಲುಗಡೆಯಿಂದ ಹಾಗೂ ಅಂಗಡಿ ಮಾಲೀಕರು ತಮ್ಮ ವಾಹನಗಳನ್ನು ಅಂಗಡಿಗಳ ಮುಂದೆ ಬೆಳಗ್ಗೆಯಿಂದ ಸಂಜೆವರೆಗೆ ನಿಲ್ಲಿಸುವುದರಿಂದ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.ವ್ಯಾಪ್ತಿಯಲ್ಲಿ ಅಸ್ಸಾಂ ಕಾರ್ಮಿಕ ದುರ್ವರ್ತನೆ ಜಾಸ್ತಿಯಾಗಿದ್ದು ದಾಖಲಾತಿಗಳಿಲ್ಲದೆ ವಾಹನ ಚಾಲಾಹಿಸುತ್ತಿದ್ದಾರೆ.ಇದಕ್ಕೆ ಕೆಲವು ಮಾಲೀಕರು ಅವರಿಗೆ ಸಾತ್ ನೀಡುತ್ತಿದ್ದಾರೆ ಎಂದು ದೂರಿದರು. ಅಲ್ಲದೆ ಸೋಮವಾರ ಗೂಡ್ಸ್ ವಾಹನಗಳಲ್ಲಿ ಜನರನ್ನು ಸಾಗಾಟಮಾಡಲಾಗುತ್ತಿದ್ದು ಇದರಿಂದ ಆಟೋ ಚಾಲಕರು ಬಾಡಿಗೆ ಇಲ್ಲದೆ ತೊಂದರೆ ಅನುಭವಿಸುವಂತ್ತಾಗಿದೆ. ಸೋಮವಾರ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಮುಖ್ಯ ರಸ್ತೆಯಲ್ಲೇ ಅಂಗಡಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದು ಇದರಿಂದ ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಜಾಕ್ ಸಭೆಯಲ್ಲಿ ಗಮನಸೆಳೆದರು. ಇದಕ್ಕೆ ಇತರ ಆಟೋ ಚಾಲಕರು ಧ್ವನಿಗೂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಠಾಣಾಧಿಕಾರಿ ಮಂಜುನಾಥ್ ಮುಂದೆ ಬಸ್ ಮಾಲೀಕರ ಚಾಲಕರ ಮತ್ತು ಪಟ್ಟಣದ ಅಂಗಡಿ ಮಾಲೀಕರ ಹಾಗೂ ಅಸ್ಸಾಂ ಕಾರ್ಮಿಕರನ್ನು ಹೊಂದಿರುವ ಮಾಲೀಕರ ಸಭೆಯನ್ನು ಕರೆಯಲಾಗುವುದು ತದನಂತರ ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದರು. ಪಟ್ಟಣದ ಆಟೋ ನಿಲ್ದಾಣ ಸೇರಿದಂತೆ ಇನ್ನಿತರ ವಾಹನ ನಿಲುಗಡೆ ನಿಷೇದಿತ ಕಡೆಗಳಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡಿದವರ ವಿರುದ್ಧ ದಂಡ ವಿಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಠಾಣಾಧಿಕಾರಿ ಮಂಜುನಾಥ್ ತಿಳಿಸಿದರು.
ಸಭೆಯಲ್ಲಿ ವಾಹನ ಚಾಲಕ ಮತ್ತು ಮಾಲೀಕರ ಸಂಘದ ಕಾರ್ಯದರ್ಶಿ ಝಕರಿಯ, ಮಹೇಶ್, ರೇಣುಕೇಶ, ವಿಜಯಕುಮಾರ್, ಸುಕುಮಾರ್, ಜಾಫರ್, ಹಂಸ ಬಿದ್ದಪ್ಪ, ರಾಶಿದ್ ಸೇರಿದಂತೆ ಸಂಘದ ಎಲ್ಲಾ ಸದಸ್ಯರು,ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು. (ವರದಿ :ಝಕರಿಯ ನಾಪೋಕ್ಲು )












