ನಾಪೋಕ್ಲು ಮಾ.22 : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿರಾಜಪೇಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಈಗಾಗಲೇ ಸ್ಪರ್ಧಿಸುವುದಾಗಿ ಘೋಷಣೆ ಮಾಡಿರುವ ಅಲ್ಪಸಂಖ್ಯಾತರ ನಾಯಕ ಕುಂಜಿಲ ಗ್ರಾಮದ ಮಕ್ಕಿ ನಾಸಿರ್ ಬೆಂಬಲಿಗರೊಂದಿಗೆ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಕಾರ್ಯಕರ್ತರ ಸಭೆ ನಡೆಸಿ ಅಬ್ಬರದ ಪ್ರಚಾರ ಮಾಡುತ್ತಿದ್ದು, ರಾಜಕೀಯ ಪಕ್ಷಗಳಿಗೆ ಟಾಂಗ್ ಕೊಡಲು ಮುಂದಾಗಿದ್ದಾರೆ.
ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ನೂರಾರು ವಾಹನದಲ್ಲಿ ಎಮ್ಮೆಮಾಡು ದರ್ಗಾಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಅವರು ಎಮ್ಮೆಮಾಡು ಗ್ರಾಮದ ಕೂರುಳಿ ಪಡಿಯಾಣಿ,ಹಾಗೂ ಕಕ್ಕಬ್ಬೆ ಕುಂಜಿಲ, ಕೊಳಕೇರಿ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಕಾರ್ಯಕರ್ತರನ್ನು ಒಗ್ಗೂಡಿಸಿ ಶಕ್ತಿ ಪ್ರದರ್ಶನದೊಂದಿಗೆ ಮುಂಬರುವ ಚುನಾವಣೆಯಲ್ಲಿ ಮತ ಪಡೆದು ಗೆಲುವು ಸಾಧಿಸುವ ಹಾಗೂ ರಾಜಕೀಯ ಪಕ್ಷಗಳಿಗೆ ಟಾಂಗ್ ಕೊಡುವ ಕಾರ್ಯ ಪ್ರಾರಂಭ ಮಾಡುತ್ತಿದ್ದಾರೆ.
ಇದರಿಂದ ರಾಜಕೀಯ ಪಕ್ಷಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇವರು ಕಬ್ಬಿಣದ ಕಡಲೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಹಲವು ದಿನಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತೆರೆ ಮರೆಯಲ್ಲಿ ಬೆಂಬಲಿಗರೊಂದಿಗೆ ಗೌಪ್ಯ ಸಭೆನಡೆಸುತ್ತಿದ್ದ ನಾಸಿರ್ ರವರು ಇದೀಗ ರಸ್ತೆಗಳಿದು ರೋಡ್ ಶೋ ಮುಖಾಂತರ ಬಹಿರಂಗವಾಗಿ ಫೀಲ್ಡಿಗೆ ಇಳಿದಿದ್ದಾರೆ.
ಪ್ರಾರಂಭದಲ್ಲೇ ಅಪಾರ ಸಂಖ್ಯೆಯ ಯುವಕರನ್ನು ಒಗ್ಗೂಡಿಸಿ ಕ್ಷೇತ್ರದ ವಿವಿಧ ಗ್ರಾಮಕ್ಕೆ ಭೇಟಿ ನೀಡಿ ಮತದಾರರೊಂದಿಗೆ ಚರ್ಚೆ ನಡೆಸಿ ಗ್ರಾಮದ ಸಮಸ್ಯೆಯನ್ನು ಆಲಿಸಿ,
ಜನರ ಬೇಡಿಕೆಯನ್ನು ಈಡೇರಿಸಿಕೊಡುವ ಭರವಸೆಯೊಂದಿಗೆ
ಮತದಾರರನ್ನು ಸೆಳೆಯುವ ಕೆಲಸ ಪ್ರಾರಂಭ ಮಾಡಿದ್ದಾರೆ.
ಈ ಸಂದರ್ಭ ಪ್ರಮುಖರಾದ ಅಬೂಬಕ್ಕರ್,ಹ್ಯಾರಿಸ್ ನಾಪೋಕ್ಲು, ಅಶ್ರಫ್ ಪೊಯಕರೆ, ಆಲಿ ಕುಂಡಂಡ,
ಸಂಶುದ್ದೀನ್ ಮೌಲವಿ ಕುಂಜಿಲ, ಸಿರಾಜ್ ವಯಕೋಲ್,
ಸಲಾಂ ತರ್ಮಲ್, ಅಶ್ರಫ್ ಪತ್ತಂಗೋಡ್, ಮುಜೀಬ್ ಕೊಳಕೇರಿ,ಇನ್ನಿತರ ಮುಖಂಡರು, ಅಪಾರ ಸಂಖ್ಯೆಯ ಯುವ ಕಾರ್ಯಕರ್ತರು ಬೆಂಬಲಿಗರು ಪಾಲ್ಗೊಂಡಿದ್ದರು. (ವರದಿ : ಝಕರಿಯ ನಾಪೋಕ್ಲು)