ಸೋಮವಾರಪೇಟೆ ಮಾ.22 : ಯುವತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಸಿದ ಆರೋಪದಡಿ ಮೂವರ ವಿರುದ್ಧ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋಮವಾರಪೇಟೆ ತಾಲ್ಲೂಕು ತಾಕೇರಿ ಸಮೀಪದ ಬಿಳಿಗೇರಿಯಲ್ಲಿ 19 ವರ್ಷದ ದಲಿತ ಯುವತಿಯನ್ನು ರಾತ್ರಿ ವೇಳೆ ಎಳೆದೊಯ್ದ ಮೂವರು ಜಾತಿ ನಿಂದನೆ ಮಾಡಿರುವುದಲ್ಲದೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿ ರಾಜು ಎಂಬಾತನನ್ನು ಆಟೋ ರಿಕ್ಷಾ ಸಹಿತ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಉಳಿದ ಇಬ್ಬರು ಆರೋಪಿಗಳಾದ ನೌಷದ್ ಹಾಗೂ ಫಾರೂಕ್ ತಲೆ ಮರೆಸಿಕೊಂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಹಿಂದೂ ಜಾಗರಣಾ ವೇದಿಕೆ ಆರೋಪಿಗಳನ್ನು ತಕ್ಷಣ ಬಂಧಿಸದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.